ಅಮೃತ್ ಯೋಜನೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ

News Desk

ಸಚಿವರು, ಶಾಸಕರು ಮೇಲಾಧಿಕಾರಿಗಳ ವಿರುದ್ಧ ಲೋಕಾಯುಕ್ತ, ಇಡಿಗೆ ದೂರು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಹಗರಣದ ಆರೋಪ ಕೇಳಿ ಬಂದಿದ್ದು ಅಮೃತ್ ಯೋಜನೆ ಒಂದರಲ್ಲೇ 17,000 ಕೋಟಿ ರೂ ಅನುದಾನ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಸಚಿವರಾದ ಬೈರತಿ ಸುರೇಶ್
, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಲೋಕಾಯುಕ್ತ ಮತ್ತು ಇ.ಡಿಗೆ ದೂರು ನೀಡಿದ್ದಾರೆ.

ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಚಂದ್ರಪ್ಪ ಮತ್ತು ಮುದ್ದುರಾಜಣ್ಣ ಹಾಗೂ ಪೌರಾಡಳಿತ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕಾವಲಿಕಟ್ಟಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿರುವ ಎನ್.ಆರ್.ರಮೇಶ್ 7,281 ಪುಟಗಳಷ್ಟು ದಾಖಲೆಗಳನ್ನು ತಮ್ಮ ದೂರಿನೊಂದಿಗೆ ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೆ ಸಲ್ಲಿಸಿ ಸಮಗ್ರ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದಾರೆ.

ಏನಿದು ಅಮೃತ್ ಯೋಜನೆ?: ದೇಶದ 500ಕ್ಕೂ ಹೆಚ್ಚು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯ ಅನುಷ್ಠಾನಕ್ಕೆಂದು ಪ್ರತೀ ವರ್ಷ ಸರಾಸರಿ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ಬಿಡುಗಡೆ ಮಾಡಲಾಗುತ್ತದೆ. ರಾಜ್ಯದ ಅಮೃತ್ ಯೋಜನೆ ಅನುಷ್ಠಾನಕ್ಕಾಗಿ 2023-24 ಮತ್ತು 2024-25ರ ಸಾಲುಗಳಲ್ಲಿ ಒಟ್ಟು 16,989.66 ಕೋಟಿ ರೂ ಮೊತ್ತದ ಅನುದಾನವನ್ನು 27 ನಗರಸಭೆ ಮತ್ತು ಪುರಸಭೆಗಳಲ್ಲಿ ಘೋಷಣೆ ಮಾಡಲಾಗಿದೆ. ಈ ಸಾಲುಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆಯಾಗಿರುವ ಯೋಜನೆಯ 16,989.66 ಕೋಟಿ ರೂ ಮೊತ್ತದ ಅನುದಾನಗಳ ಪೈಕಿ ಶೇ.75ರಷ್ಟು ಅನುದಾನ ಬಿಡುಗಡೆಯಾಗಿದ್ದು, ಇನ್ನುಳಿದ ಶೇ 25ರಷ್ಟು ಅನುದಾನ ಇಲಾಖೆಗೆ ಬಿಡುಗಡೆಯಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆ ಸಚಿವರಾದ ಭೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್‌ಖಾನ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರು 16,989.66 ಕೋಟಿ ರೂ ಮೊತ್ತದ ಅನುದಾನಗಳ ಪೈಕಿ ಶೇ.50ಕ್ಕೂ ಹೆಚ್ಚು ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎನ್‌.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಒಂದೇ ಕಾಮಗಾರಿಗೆ ಸಂಬಂಧಿಸಿದ ಮೂರು ಹಂತಗಳ ಫೋಟೋಗಳನ್ನೇ ಹಲವಾರು ಕಾಮಗಾರಿಗಳಿಗೆ ಜೋಡಿಸಲಾಗಿದೆ ಎಂದು ಆರೋಪಿಸಿರುವ ಅವರು ಪೂರ್ವ ನಿಗದಿತ ಗುತ್ತಿಗೆದಾರರಿಗೆ ಮಾತ್ರವೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಅವಕಾಶ ದೊರಕಿಸಿಕೊಟ್ಟಿರುವುದು ಸೇರಿದಂತೆ ಅನೇಕ ಕಾನೂನು ಬಾಹಿರ ಕಾರ್ಯಗಳ ಮೂಲಕ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರುದಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಮೇಶ್ ಅವರು ಈ ಹಗರಣದಲ್ಲಿ ಭಾಗಿಯಾಗಿರುವ ಸಚಿವರು, ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಅಮೃತ್ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸುವಂತೆಯೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

 

Share This Article
error: Content is protected !!
";