ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಜೀವ್ ಗೌಡ ತಲೆ ಮರೆಸಿಕೊಂಡಿದ್ದು ಆರೋಪಿಗಾಗಿ ತಂಡಗಳಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ.
ಹೀಗಿದ್ದರೂ ಈ ನಡುವೆ ಪುಂಡಾಟ ಮಾತ್ರ ಮುಂದುವರಿದಿದೆ. ಆ್ಯಸಿಡ್ ಎರಚುವುದಾಗಿ ಶಿಡ್ಲಘಟ್ಟ ಪೌರಾಯುಕ್ತೆಗೆ ಮತ್ತೆ ಬೆದರಿಕೆ ಹಾಕಲಾಗಿದ್ದು, ಆರೋಪಿ ರಾಜೀವ್ ಗೌಡ ಪರ ಪತ್ರ ಬರೆದು ಎಚ್ಚರಿಕೆ ನೀಡಿರುವ ಬಗ್ಗೆ ಪೌರಾಯುಕ್ತೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬೆದರಿಕೆ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮುಖಂಡರ ಆಕ್ರೋಶ:
ಪೌರಾಯುಕ್ತೆಗೆ ಮನಬಂದಂತೆ ನಿಂದಿಸಿ, ಬೆದರಿಕೆ ಹಾಕಿರುವ ರಾಜೀವ್ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್ನಲ್ಲಿಯೇ ಆಕ್ರೋಶ ಭುಗಿಲೆದ್ದಿದೆ.
ಶಿಡ್ಲಘಟ್ಟದಲ್ಲಿ ಆತ ನಡೆದುಕೊಂಡಿರುವ ರೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗ್ತಿದ್ದು, ಪೊಲೀಸರು ಶೀಘ್ರ ಸೂಕ್ತಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಮತ್ತೆ ನಡೆಯಲಿದೆ.
ನಿರೀಕ್ಷಣಾ ಜಾಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್, ವಿಚಾರಣೆಯನ್ನ ಜನವರಿ 22ಕ್ಕೆ ಅಂದರೆ ಇಂದಿಗೆ ಮುಂದೂಡಿತ್ತು.
ಅಮಾನತಿಗೆ ಶಿಫಾರಸು:
ಪಕ್ಷದ ಮುಖಂಡ ರಾಜೀವ್ಗೌಡನ ವರ್ತನೆ ಆಡಳಿತರೂಢ ಕಾಂಗ್ರೆಸ್ಗೆ ಮುಜುಗರ ತಂದ ಹಿನ್ನೆಲೆ, ಆರೋಪಿ ರಾಜೀವ್ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಆದರೆ ನಾಪತ್ತೆಯಾಗಿರುವ ರಾಜೀವ್ ಗೌಡ ನೋಟೀಸ್ ಗೆ ಉತ್ತರಿಸದ ಕಾರಣ ಆತನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿರುವ ಘಟನೆ ನಡೆದಿದೆ.

