ಚಂದ್ರವಳ್ಳಿ ನ್ಯೂಸ್, ಕಟ್ಟೂರು:
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಕೊನೆಗೂ ಶನಿವಾರ ಮಧ್ಯಾಹ್ನದ ವೇಳೆಗೆ ಬಯಲಾಗಿದೆ. ಆರೋಪಿ ತನ್ನ ಮನೆಯಲ್ಲೇ ತೋಡಿದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ಮನೆಯಲ್ಲಿ ನಾಲ್ಕಡಿ ಆಳದ ಗುಂಡಿ ತೋಡಿದ ಆರೋಪಿ ಅಕ್ಷಯ್ ಕುಮಾರ್, ಮೊದಲಿಗೆ ತಾಯಿಯ ಮೃತದೇಹ, ಅದರ ಮೇಲೆ ತಂಗಿಯ ಮೃತದೇಹ ಹಾಗೂ ಕೊನೆಯಲ್ಲಿ ತಂದೆಯ ಮೃತದೇಹವನ್ನು ಹಾಕಿ ಟೈಲ್ಸ್ನಿಂದ ಮುಚ್ಚಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಭೀಮ್ರಾಜ್, ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾ ಕೊಲೆಯಾದವರು. ಆರೋಪಿತನನ್ನು ಶನಿವಾರ ಬೆಂಗಳೂರಿನಿಂದ ಕರೆದುಕೊಂಡು ಬಂದ ನಂತರ ಉಪವಿಭಾಗಾಧಿಕಾರಿ ಸಮಕ್ಷಮದಲ್ಲಿ ಮಹಜರು ಮಾಡಿದ ನಂತರ ಮನೆಯೊಳಗೆ ಹೂತಿಟ್ಟ ಮೂರು ಶವಗಳು ದೊರೆತಿವೆ.
ಬಳಿಕ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸುವ ಕಾರ್ಯ ನಡೆಯಿತು. ಘಟನಾ ಸ್ಥಳ ಹಾಗೂ ಆಸ್ಪತ್ರೆ ಆವರಣದಲ್ಲಿ ಸೇರಿರುವ ಅಪಾರ ಸಂಖ್ಯೆಯ ಜನಸ್ತೋಮ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಎಸ್ಪಿ ಪ್ರತಿಕ್ರಿಯೆ:
ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ತಂದೆ – ತಾಯಿ, ಸಹೋದರಿ ಜಯದೇವ ಆಸ್ಪತ್ರೆಗೆ ಹೋದವರು ವಾಪಸ್ ಬಂದಿಲ್ಲ ಎಂದು ಆರೋಪಿ ಅಕ್ಷಯ್ ನಾಪತ್ತೆ ದೂರು ದಾಖಲಿಸಿದ್ದರು. ಇದರಂತೆ ಬಳಿಕ ತಿಲಕ್ ನಗರ ಪೊಲೀಸ್ ಅಧಿಕಾರಿಗಳು, ಆರೋಪಿ ಅಕ್ಷಯನನ್ನು ವಿಚಾರಣೆ ಮಾಡಿದಾಗ, ಆರೋಪಿ ದ್ವಂದ್ವ ಹೇಳಿಕೆ ನೀಡಿದ್ದ. ಬಳಿಕ ಪೊಲೀಸರು ಅನುಮಾನಗೊಂಡು ವಿಚಾರಣೆ ಮಾಡಿದಾಗ ಸಿಕ್ಕ ಮಾಹಿತಿ ಮೇರೆಗೆ ತಿಲಕ್ ನಗರ ಪೊಲೀಸರು ಶುಕ್ರವಾರ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್ಪಿ ಜಾಹ್ನವಿ ತಿಳಿಸಿದ್ದಾರೆ.

ತಿಲಕ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ಮಾಡಿದ್ದಾರೆ. ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಮೂರು ಮೃತ ದೇಹಗಳನ್ನು ಹೊರೆತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಕೊಲೆಗೆ ಕಾರಣ ಮತ್ತು ಬಳಸಿದ ಆಯುಧದ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಮಾಹಿತಿ ಗೊತ್ತಾಗಲಿದೆ. ತಿಲಕ್ ನಗರ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡ ಬಳಿಕ ನಮಗೆ ಹಸ್ತಾಂತರಿಸಿದ ನಂತರ ನಾವು ತನಿಖೆ ಮಾಡುತ್ತೇವೆ ಎಂದರು.
ಕೊಲೆ ಪ್ರಕರಣ ಸಂಬಂಧ ದಾಖಲಾದ ಎಫ್ಐಆರ್ ನಲ್ಲಿ ಇಬ್ಬರನ್ನು ಆರೋಪಿಗಳನ್ನಾಗಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

