ಒಂದೇ ಕುಟುಂಬದ ಮೂರು ಮಂದಿ ಆತ್ಮಹತ್ಯೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದೇ ಕುಟುಂಬದ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಕೋರಮಂಗಲ ಸಮೀಪದ ತಾವರೆಕೆರೆ ಬಳಿಯ ಎಸ್‌.ಜಿ.ಪಾಳ್ಯದಲ್ಲಿ ನಡೆದಿದೆ.

ಮಗ ಮೌನೀಶ್‌(14), ತಾಯಿ ಸುಧಾ(45), ಅಜ್ಜಿ ಮುದ್ದಮ್ಮ(65) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.

ತಾಯಿ ಸುಧಾ ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಸ್​.ಜಿ.ಪಾಳ್ಯ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

ಸಾಲ ಬಾಧೆ?
ಸುಧಾ ಅವರು ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ತಾಯಿ ಮುದ್ದಮ್ಮ ಜೊತೆಗೆ ಸುಧಾ ಮತ್ತು ಮೌನೀಶ್​​ ವಾಸಿಸುತ್ತಿದ್ದರು.

ಸಣ್ಣ ಹೋಟೆಲ್‌ ಒಂದರಲ್ಲಿ ಸುಧಾ ಮತ್ತು ಮುದ್ದಮ್ಮ ಅವರು ಬಿರಿಯಾನಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಹೋಟೆಲ್ ಉದ್ಯಮ ನಷ್ಟಕ್ಕೆ ಒಳಗಾಗುತ್ತಿದ್ದಂತೆ ಚಿಪ್ಸ್‌ಹಾಗೂ ಹಾಲು ಮಾರುತ್ತಿದ್ದರು. ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಸಾಲ ಬಾಧೆ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

- Advertisement - 

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೂವರ ಮೃತದೇಹಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿ, 112ಗೆ ಕರೆ ಮಾಡಿ ಸಾವಾಗಿದೆ ಎಂದು ತಿಳಿಸಿದ್ದರು. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೂವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮೃತರು ಮೂಲತಃ ತಮಿಳುನಾಡಿನವರಾಗಿದ್ದು ಭಾನುವಾರವಷ್ಟೇ ಧರ್ಮಪುರಿಯ ಒಂದು ದೇವಾಲಯಕ್ಕೆ ಹೋಗಿ ಬಂದಿದ್ದರು. ಬಾಲಕ ಕ್ರೈಸ್ಟ್ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು ವರದಿ ಬಂದ ಮೇಲೆ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.

 

 

Share This Article
error: Content is protected !!
";