ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ಮಧುಸೂದನ್ ಸೋಮಿಶೆಟ್ಟಿ ರಾವ್ ಅವರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದು ಮೃತದೇಹವನ್ನು ಆಂಧ್ರ ಪ್ರದೇಶದ ಹುಟ್ಟೂರಾದ ನೆಲ್ಲೂರಿಗೆ ರವಾನಿಸಲು ಸಿದ್ಧತೆ ನಡೆದಿದೆ.
ಮಧುಸೂದನ್ ಸೋಮಿಶೆಟ್ಟಿ ರಾವ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರೀ ಹಾಗೂ ಮಗ ಮುಕುಂದ ಶ್ರೀದತ್ತ ಜೊತೆಗೆ ಮಧುಸೂದನ್ ಕಾಶ್ಮೀರಕ್ಕೆ ತೆರಳಿದ್ದರು.
ಈ ಕುಟುಂಬದ ಜೊತೆಗೆ ಇನ್ನೆರಡು ಕುಟುಂಬಗಳೂ ತೆರಳಿದ್ದವು. ಈ ಪೈಕಿ ಎರಡು ಕುಟುಂಬಗಳು ಊಟ ತರಲು ತೆರಳಿದರೆ, ಮಧುಸೂದನ್ ಪತ್ನಿ ಸಹ ಸ್ನೇಹಿತರೊಂದಿಗೆ ಹೊರ ಹೋದಾಗ ಉಗ್ರರು ದಾಳಿ ಮಾಡಿದ್ದು ಮಧುಸೂದನ್ ಉಗ್ರರ ದುಷ್ಕೃತ್ಯಕ್ಕೆ ಬಲಿಯಾಗಿದ್ದಾರೆ.
ಮಧುಸೂದನ್ ಅವರು ಇತ್ತೀಚೆಗಷ್ಟೇ ರಾಮಮೂರ್ತಿನಗರದಲ್ಲಿ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದರು. ಗಂಡ, ಹೆಂಡತಿ ಇಬ್ಬರೂ ಸಹ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಉಗ್ರರ ದಾಳಿಗೆ ರಾಜ್ಯದ ಮತ್ತಿಬ್ಬರು ಸಾವು:
ಉಗ್ರರ ಪೈಶಾಚಿಕ ಕೃತ್ಯದಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಹಾಗೂ ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಾಗಿದ್ದ ಭರತ್ ಭೂಷಣ್ (41) ಕೂಡ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಮಂಜುನಾಥ್ ರಾವ್ ಅವರು ಏಪ್ರಿಲ್-19ರಂದು ಅವರು ಪತ್ನಿ ಪಲ್ಲವಿ ಮತ್ತು ಪುತ್ರನ ಜೊತೆಗೆ ಪ್ರವಾಸ ಕೈಗೊಂಡಿದ್ದರು. ಇವರ ಜೊತೆ ಸಾಗರದ ತಂಡವೂ ಇತ್ತು. ಶಿವಮೊಗ್ಗದ ವಿಜಯನಗರದ ನಿವಾಸಿಯಾಗಿರುವ ಮಂಜುನಾಥ್ ಅವರ ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್ ಕೋಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಅಭಿಜಯ ಅವರು ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇ. 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆ ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ.
ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರು ಮೂರು ವರ್ಷದ ಮಗು ಹಾಗೂ ಪತ್ನಿ ಸುಜಾತ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಭರತ್, ಪ್ರಸ್ತುತ ಭದ್ರಪ್ಪ ಲೇಔಟ್ನಲ್ಲಿ ಡಯಾಗೋಸ್ಟಿಕ್ ಸೆಂಟರ್ ಮಾಲೀಕರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.