ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರಾದ್ಯಂತ ಉತ್ಪಾದನೆಯಾಗುವ ಸುಮಾರು 500 ಟನ್ ಹಸಿ ಕಸದಿಂದ ಗ್ಯಾಸ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರಿ ಸ್ವಾಮ್ಯದ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸರ್ಕಾರದ ಅಧಿಕಾರಿಗಳು, ಜಿಬಿಎ ಆಯುಕ್ತರು, ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ನನ್ನ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಗೇಲ್ ಸಂಸ್ಥೆಯ ಜೊತೆಗಿನ ಒಡಂಬಡಿಕೆಗಳನ್ನು ಹಸ್ತಾಂತರ ಮಾಡಿಕೊಂಡಿದ್ದಾರೆ ಎಂದು ಡಿಸಿಎಂ ಹೇಳಿದರು.
ಗೇಲ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಹಸ್ತಾಂತರ ನಂತರ ವಿಧಾನಸೌಧದಲ್ಲಿ ಡಿಸಿಎಂ ಶಿವಕುಮಾರ್ ಮಾತನಾಡಿ, ಹಸಿ ಕಸದಿಂದ ಗ್ಯಾಸ್ ಉತ್ಪಾದನಾ ಘಟಕಸ್ಥಾಪನೆ ಮಾಡಲು ಗೇಲ್ ಸಂಸ್ಥೆಯವರು 123 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಯಾಸ್ ತಯಾರಿಕಾ ಘಟಕ ಸ್ಥಾಪನೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಇವರಿಗೆ ಸ್ಥಳ ನೀಡಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಸರ್ಕಾರ ಕೈ ಜೋಡಿಸಿದೆ. ಮುಂದಕ್ಕೂ ಹಲವಾರು ಒಪ್ಪಂದಗಳಿಗೆ ಈ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ಈ ಒಪ್ಪಂದದಿಂದ ಬೆಂಗಳೂರು ನಗರದ ಕಸದ ಸಮಸ್ಯೆ ಕಡಿಮೆಯಾಗಲಿದೆ. ಆದಷ್ಟು ಬೇಗ ಗ್ಯಾಸ್ ಉತ್ಪಾದನೆ ಪ್ರಾರಂಭವಾಗಲಿ. ಇಲ್ಲಿ ಉತ್ಪಾದನೆ ಮಾಡುವ ಗ್ಯಾಸ್ ಅನ್ನು ಸಾರ್ವಜನಿಕರು, ಹೋಟೆಲ್ ಉದ್ದಿಮೆದಾರರಿಗೆ ವಿತರಣೆ ಮಾಡಲಿ ಎಂದು ಶಿವಕುಮಾರ ತಿಳಿಸಿದರು.
ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಮತ್ತೆ ಜಿಬಿಎ ಕಸ ಸಮಸ್ಯೆ ನಿರ್ವಹಣೆ ಮಾಡುತ್ತಿಲ್ಲ ಎಂದು ಎಕ್ಸ್ ಪೋಸ್ಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆಸಿದ ಡಿಕೆ ಶಿವಕುಮಾರ್, ಗೇಲ್ ಸಂಸ್ಥೆಯೊಂದಿಗೆ ಯಾವ ಕೆಲಸ ಮಾಡುತ್ತಿದ್ದೇವೆ? ಕಸ ವಿಲೇವಾರಿಗೆ ನಾವು ಎಲ್ಲಾ ಕೆಲಸ ಮಾಡಿದ್ದೇವೆ.
ಆದರೆ ನ್ಯಾಯಾಲಯ ನಮಗೆ ಅಡಚಣೆ ತಂದಿತ್ತು. ಇದರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಅವರು ಯಾರೂ ನಮಗೆ ಸಹಕಾರ ನೀಡಲಿಲ್ಲ. ಈಗ 33 ಪ್ಯಾಕೇಜ್ಗಳಲ್ಲಿ ಕಸ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಲೇವಾರಿ ಘಟಕಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದು ಮುಂದಕ್ಕೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರಿನಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ, ಅನಿಲ ತಯಾರಿಕೆ ಸಂಬಂಧದ ಒಪ್ಪಂದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಡಾ. ಮಹೇಶ್ವರ್ ರಾವ್ ಹಾಗೂ ಭಾರತೀಯ ಅನಿಲ ಪ್ರಾಧಿಕಾರದ (ಗೇಲ್) ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎನ್ ಯಾದವ್ ಅವರು ವಿಧಾನಸೌಧದಲ್ಲಿ ಗುರುವಾರ ಸಹಿ ಹಾಕಿ, ಕಡತ ವಿನಿಮಯ ಮಾಡಿಕೊಂಡರು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಇದು ಮಹತ್ವವಾದ ತೀರ್ಮಾನವಾಗಿದೆ.

