ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಆರ್ಥಿಕ ಅವ್ಯವಸ್ಥೆಯಿಂದ ಸರಿಯಾದ ಸಮಯಕ್ಕೆ, ಮಾಡಿದ ಕೆಲಸಕ್ಕೆ ಹಣ ಪಾವತಿಯಾಗದೆ ಅತ್ಯಂತ ಸಂಕಷ್ಟದಲ್ಲಿರುವ ಗುತ್ತಿಗೆದಾರರ ಕಷ್ಟವೇ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಿಗೆ ಬಂಡವಾಳ ಆದದ್ದು ಕರ್ನಾಟಕ ರಾಜ್ಯದ ದುರಂತ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ 60% ಸರ್ಕಾರದ ಆಡಳಿತದಲ್ಲಿ ಸಣ್ಣ ಹಾಗು ಮಧ್ಯಮ ಹಂತದ ಗುತ್ತಿಗೆದಾರರು ಹೊಸ ಕೆಲಸ ಮಾಡಿಸುವುದು ಬಿಡಿ, ಸಂಸಾರದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದ ಹಣದಾಹಕ್ಕೆ ನೊಂದು ಬೇಸತ್ತ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ಈಗಾಗಲೇ ದಯಾಮರಣಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದರು.
ಗುತ್ತಿಗೆದಾರರಿಗೆ ಪಾವತಿಸಲು ಇನ್ನೂ ಬಾಕಿ ಇರುವ 30 ಸಾವಿರ ಕೋಟಿ ಬಾಕಿ ಹಣ ಪಾವತಿ ಮಾಡುವಷ್ಟರಲ್ಲಿ ಇನ್ನೇನು ದುರಂತಗಳು ಕಾದಿದೆಯೋ ಎಂಬ ಭಯದಲ್ಲಿ ಗುತ್ತಿಗೆದಾರರು ಜೀವ ಕೈಯಲ್ಲಿ ಹಿಡಿದುಕೊಂಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ, ನಿಮಗೆ ಮಾನವೀಯತೆ, ಕರುಣೆ ಏನಾದರೂ ಇದ್ದರೆ ಕಾಯಕ ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸಲು ಪಾರದರ್ಶಕ ವ್ಯವಸ್ಥೆ ನಿರ್ಮಾಣ ಮಾಡಿ. ಕಾಲಮಿತಿಯೊಳಗೆ ಹಣ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಿ, ಸಂಕಷ್ಟದಲ್ಲಿರುವ ಗುತ್ತಿಗೆದಾರರನ್ನು ಪಾರು ಮಾಡಿ ಎಂದು ವಿಪ ಸದಸ್ಯ ಸಿಟಿ ರವಿ ಆಗ್ರಹ ಮಾಡಿದ್ದಾರೆ.