ಪ್ರಜಾಪ್ರಭುತ್ವ ದಿನ ಪಾಲ್ಗೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೊಂದಾಯಿಸಿ-ಜಿಲ್ಲಾಧಿಕಾರಿ ಟಿ.ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವದ ಮೇಲೆ ಎಲ್ಲ ಜನರು ರಾಜ್ಯಾಧಿಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಅತ್ಯುನ್ನತ ಆಡಳಿತ ಪದ್ದತಿ ಪ್ರಜಾಪ್ರಭುತ್ವವಾಗಿದೆ.  

ಪ್ರಜೆಗಳೇ ಪ್ರಭುಗಳು ಎನ್ನುವ ಪ್ರಜಾಪ್ರಭುತ್ವದ ಸ್ಪೂರ್ತಿ ಎತ್ತಿ ಹಿಡಿಯಲು ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು, ಸಂಘಟನೆಗಳು ಸೆ. 15 ರಂದು ಜರುಗುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕರೆ ನೀಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಭೆ ನಡೆಸಿ ಅವರು ಮಾತನಾಡಿದರು.

ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅಂದು ಜಿಲ್ಲೆಯಾದ್ಯಂತ 145 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಮಾನವ ಸರಪಳಿ ರಚಿಸಲಾಗುತ್ತಿದೆ. ಮಾನವ ಸರಪಳಿ ಬಹುತೇಕ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಾಗಲಿದೆ.

ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಬರುವ ಎಲ್ಲಾ ಗ್ರಾಮಗಳ ಜನರು ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕುಗಳ ಸಾರ್ವಜನಿಕರು ಕೂಡ ಭಾಗವಹಿಸಬೇಕು. ಮುಖ್ಯವಾಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಸೂರ್ತಿಯನ್ನು ಜಗತ್ತಿಗೆ ಸಾರುವಲ್ಲಿ ಕೈ ಜೋಡಿಸಬೇಕು ಎಂದರು.

ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಕಾರ್ಯಕ್ರಮ ಸೆ.15 ರಂದು ಬೆಳಿಗ್ಗೆ 9.30 ರಿಂದ 10.30 ರವರೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವ ಮಾನವ ಸರಪಳಿ ಕಾರ್ಯಕ್ರಮ ಗಿನ್ನೆಸ್ ದಾಖಲೆಯಾಗಲಿದೆ.

ಸಾರಿಗೆ ಇಲಾಖೆ, ಖಾಸಗಿ ಸಾರಿಗೆ ಸಂಸ್ಥೆಗಳು ಸಹ ಕಾರ್ಯಕ್ರಮದ ಯಶಸ್ವಿಗೆ ಸಹರಿಸಲಿವೆ. ರಾಜ್ಯಮಟ್ಟದಲ್ಲಿ ಕಾರ್ಯಕ್ರಮದ ಯಶ್ವಸಿಗೆ  ರೋಟರಿ, ಇಂಟರ್‍ನ್ಯಾಷನಲ್, ಸಿವಿಲ್ ಸೊಸೈಟಿ ಹಾಗೂ ಇತರೆ ಪ್ರಮುಖ ಸರ್ಕಾರೇತರ ಸಂಸ್ಥೆಗಳು ಸಹಯೋಗ ನೀಡಿವೆ. ಸರ್ಕಾರದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಸುಂದರವಾದ ಲೋಗೋ ಸಹ ಬಿಡುಗಡೆ ಮಾಡಲಾಗಿದೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೊಂದಾಯಿಸಿಕೊಳ್ಳಿ :
ಪ್ರಜಾಪ್ರಭುತ್ವದ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನೊಂದಾಯಿಸಿಕೊಳ್ಳಲು ಕ್ಯೂ-ಆರ್ ಕೋಡ್ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳ ಸದಸ್ಯರು, ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಹಾಗೂ  ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಚ್ಚಿನ ಸಂಖ್ಯೆ ನೊಂದಾಯಿಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮನವಿ ಮಾಡಿದರು.

ಸಭೆಯಲ್ಲಿ ಜಿ.ಪಂ. ಮುಖ್ಯಕಾರ್ಯದರ್ಶಿ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಸೇರಿದಂತೆ ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";