ಚಂದ್ರವಳ್ಳಿ ನ್ಯೂಸ್, ಮೈಸೂರು:
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ರಾಜ್ಯ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ.
ಅಕ್ಟೋಬರ್-2ರ ಗುರುವಾರ ದಸರಾ ಗಜಪಡೆಯ ನಾಯಕ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು, ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.
ಈ ಬಾರಿಯ ನಾಡಹಬ್ಬ ದಸರಾವು 11 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮುಕ್ತಾಯದ ಹಂತಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಗತ್ಪ್ರಸಿದ್ದ ಜಂಬೂ ಸವಾರಿಗೆ ಗುರುವಾರ ಚಾಲನೆ ನೀಡಲಿದ್ದಾರೆ.
ಬಳಿಕ ಅಭಿಮನ್ಯು ಆನೆಯು ಅರಮನೆ ಬಳಿಯಿಂದ ಚಿನ್ನದ ಅಂಬಾರಿ ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಜಂಬೂ ಸವಾರಿಯಲ್ಲಿ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್ ನೀಡುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರುಗು ಸಿಗಲಿದೆ.

