ಜ.5ರ ಇಂದು ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು
1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಜ.5ರ ಭಾನುವಾರ ಮಧ್ಯಾಹ್ನ 12-10 ರಿಂದ 12-20 ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ಬ್ರಹ್ಮರಥೋತ್ಸವವನ್ನು ಅದ್ಧೂರಿಯಾಗಿ, ಯಶಸ್ವಿಯಾಗಿ, ಶ್ರದ್ಧಾಭಕ್ತಿಯಿಂದ ನೆರವೇರಿಸಲು ಈಗಾಗಲೇ ಸಕಲ ಸಿದ್ಧತೆ ನಡೆಸಿಕೊಳ್ಳಲಾಗಿದೆ.

ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಬರಲಿದ್ದಾರೆ. ಬ್ರಹ್ಮರಥೋತ್ಸವ ವೇಳೆ ಯಾವುದೇ ಅಪಘಾತ, ಅನಾಹುತ, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಅದರಂತೆ ಭಕ್ತಾಧಿಗಳ ಸಂಚಾರಕ್ಕೆ ದೊಡ್ಡಬಳ್ಳಾಪುರ ಕೆಎಸ್ ಆರ್ ಟಿಸಿ ಘಟಕದ ವತಿಯಿಂದ ಸುಮಾರು 75 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಜನಸಂದಣಿಯಲ್ಲಿ ಜನರ ಚಲನವಲನ ಗಮನಹರಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ದೇವಸ್ಥಾನ ಸುತ್ತಾಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಾಹನಗಳ ನಿಲುಗಡೆಗೆ ಮಾಕಳಿ ಕಡೆಯಿಂದ ಬರುವ ವಾಹನಗಳಿಗೆ ದೇವಸ್ಥಾನ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಂಟನಕುಂಟೆ, ಹಾಡೋನಹಳ್ಳಿ ಮಾರ್ಗವಾಗಿ ಬರುವ ವಾಹನಗಳಿಗೆ ಲಘುಮೇನಹಳ್ಳಿ ಗೇಟ್ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಅನುಮತಿ ಇರುವುದಿಲ್ಲ.

ಜನಸಂದಣಿಯಲ್ಲಿ ತಲೆ ಸುತ್ತು, ಇತರೆ ತೊಂದರೆಗಳು ಉಂಟಾದರೆ ವೈದ್ಯಕೀಯ ಸೇವೆ ಕಲ್ಪಿಸಲು ದೇವಸ್ಥಾನ ಬಳಿ ವೈದ್ಯರ ತಂಡ ಇರಲಿದೆ‌. ಎರಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ವೈದ್ಯರ ತಂಡದೊಂದಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಅವಕಾಶ ಮಾಡಲಾಗಿದೆ.

 

 

 

- Advertisement -  - Advertisement - 
Share This Article
error: Content is protected !!
";