ಚಂದ್ರವಳ್ಳಿ ನ್ಯೂಸ್, ತಿಪಟೂರು:
ಸೆಪ್ಟೆಂಬರ್ 2 ರಂದು ಸೆ.2 ಸೋಮವಾರ ತಿಪಟೂರಿನ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ, ವಿಚಾರ ಸಂಕಿರಣ ಹಾಗೂ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಗೋಷ್ಠಿ ಏರ್ಪಡಿಸಲಾಗಿದೆ ಮಾಧ್ಯಮ ಮತ್ತು ರೈತ ಸಂತೆ ನಡೆಯಲಿದೆ.
78ನೇ ರಾಷ್ಟ್ರೀಯ ಮಂಡಳಿ ಸಭೆಯ ಜೊತೆಗೆ ಪತ್ರಕರ್ತರ ಮತ್ತು ರೈತ ಬಂಧುಗಳ ವಿಚಾರ ಸಂಕಿರಣ, ಬೃಹತ್ ನಾಣ್ಯ ಮತ್ತು ಅಂಚೆಚೀಟಿ ಪ್ರದರ್ಶನ ಮತ್ತು ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಇರುತ್ತದೆ. ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಸಚಿವರುಗಳು, ಶಾಸಕರುಗಳು, ಮಾಧ್ಯಮ ಮಿತ್ರರು, ರೈತ ನಾಯಕರು, ಉನ್ನತ ಅಧಿಕಾರಿಗಳು, ಗಣ್ಯರು ಕಲ್ಪತರು ನಾಡಿಗೆ ಬರುವವರಿದ್ದಾರೆ.
ಇಲ್ಲಿನ ತೆಂಗಿನ ಖಾದ್ಯಗಳ ಸವಿಯಲಿದ್ದಾರೆ. ಪರಿಣಿತರೊಂದಿಗೆ ವಿಚಾರ ವಿನಿಮಯವಾಗಲಿದೆ. ದೇಶದ ನಾನಾ ಮೂಲೆಮೂಲೆಗಳಿಂದ ಬರುವ ಮಾಧ್ಯಮ ಮಿತ್ರರೊಂದಿಗೆ ಮಿತ್ರತ್ವದ ಸಂಕೋಲೆ ಸೃಷ್ಟಿಯಾಗಲಿದೆ. ದ್ವೇಷ, ವೈರತ್ವ, ಅಸಹನೆ ಬದಿಗೊತ್ತಿ ಪರಸ್ಪರ ಪ್ರೀತಿಯನ್ನು ಹಂಚುವ ಮೂಲಕ ಮಾನವ ಬಂಧುತ್ವದ ಸೇತುವೆ ಕಟ್ಟಲಿವೆ. ಸಮಾಜದ ನಾನಾ ಸಮಸ್ಯೆಗಳನ್ನು ಚಿಂತಿಸಿ, ಮಂಥಿಸಿ ಮಾನವೀಯತೆಯ ಗಾಳಿ ಬೀಸಲಿದೆ.
ಇದೊಂದು ದೇಶದಲ್ಲೇ ಅಪರೂಪದ ಪ್ರಪ್ರಥಮ ಕಾರ್ಯಕ್ರಮ. ನಮ್ಮೊಂದಿಗೆ ಕರ್ತವ್ಯ ಪರ, ನಿಸ್ವಾರ್ಥ, ಪ್ರಾಮಾಣಿಕ, ಸ್ವಾಭಿಮಾನಿ ಪತ್ರಕರ್ತರ ಮತ್ತು ರೈತರ ತಂಡ ಆಧಾರ ಕಂಬವಾಗಿ ನಿಂತಿದೆ. ಸಹೃದಯತೆ ಜೊತೆಗೆ ಸಂವೇಧನೆಯ ಮನಸ್ಥಿತಿಯುಳ್ಳ ಸಮಾನ ಮನಸ್ಕ, ಸಹನಶೀಲ, ವಿಚಾರವಂತ, ವಿವೇಚನಾಶೀಲ ಪತ್ರಕರ್ತರು, ರೈತರು, ಸಮಾಜ ಸೇವಕರು, ನಿಷ್ಪಕ್ಷಪಾತ ಅಧಿಕಾರಿಗಳು, ನೌಕರರು, ಶ್ರಮಜೀವಿ ಉದ್ಯಮಿಗಳು, ಕಾರ್ಮಿಕರು, ದಲಿತ ಬಂಧುಗಳು, ಪ್ರಜ್ಞಾವಂತ ನಾಗರೀಕರು ನಮ್ಮೊಂದಿಗಿರೋದು ನಮ್ಮ ಕಲಾಕೃತಿಯ ಹೆಮ್ಮೆ. ಊರಲ್ಲ, ಜಿಲ್ಲೆಯಲ್ಲ, ರಾಜ್ಯವಲ್ಲ ಇಡೀ ದೇಶದ ಗಮನ ಸೆಳೆಯುತ್ತಿರುವ ಈ ನಮ್ಮ ಕಾರ್ಯಕ್ರಮಕ್ಕೆ ಸಹೃದಯವಂತರು ಆಗಮಿಸಬೇಕು.
ಸತ್ಯ, ನ್ಯಾಯ, ಪ್ರಾಮಾಣಿಕತೆ, ನಿಷ್ಠೆ, ಧರ್ಮ, ಮಾನವೀಯತೆ, ಸ್ನೇಹತ್ವದ ಬುನಾದಿ ಮೇಲೆ ನೆಮ್ಮದಿ, ಶಾಂತಿ, ಸೌಹಾರ್ಧದ ಸೌಧ ಕಟ್ಟುವ ಬನ್ನಿ, ಎಲ್ಲ ಮರೆತು ನಮ್ಮೊಂದಿಗೆ ಹೊಸ ತ್ಯಾಗದ, ಶಾಂತಿಯ, ನೆಮ್ಮದಿಯ ಮಾನವ ಪ್ರೇಮದ ಸ್ವರ್ಗ ಕಟ್ಟೋಣ ಎಂದು ಪತ್ರಕರ್ತ ತಿಪಟೂರು ಕೃಷ್ಣ ಮನವಿ ಮಾಡಿದ್ದಾರೆ.