ಇಂದಿನ ರಾಜಕಾರಣ ಎಂದರೆ ಸರಣಿ ಭ್ರಷ್ಟಾಚಾರದ ಹಗರಣಗಳು, ಸರಣಿ ಭಿನ್ನಮತೀಯ ಚಟುವಟಿಕೆಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿನ ರಾಜಕಾರಣ……..ಸರಣಿ ಅಪಘಾತಗಳು
, ಸರಣಿ ಆತ್ಮಹತ್ಯೆಗಳು, ಸರಣಿ ಅಪರಾಧಗಳು, ಸರಣಿ ಅನಾರೋಗ್ಯಗಳು, ಸರಣಿ ಭ್ರಷ್ಟಾಚಾರದ ಹಗರಣಗಳು,……

ಮತ್ತೊಂದು ಕಡೆ,  ಮೂರು ಪಕ್ಷಗಳ 224 ಜನಪ್ರತಿನಿಧಿಗಳಾದ ವಿಧಾನಸಭಾ ಸದಸ್ಯರ ನಡುವೆ ಅಧಿಕಾರಕ್ಕಾಗಿ, ಸರಣಿ ಭಿನ್ನಮತೀಯ ಚಟುವಟಿಕೆಗಳು, ಸರಣಿ ಅನಾವಶ್ಯಕವಾದ ಸಮಾವೇಶಗಳು, ಸರಣಿ ಡಿನ್ನರ್ ಪಾರ್ಟಿಗಳು, ಸರಣಿ ಮಾತುಕತೆಗಳು, ಸರಣಿ ದೆಹಲಿ ಸಂಧಾನಕಾರರ ಯಾತ್ರೆಗಳು……

ಜನ ಮಾತ್ರ ಇನ್ನೂ ಇವರುಗಳ ಮಧ್ಯೆ ತಮ್ಮ ಆಯ್ಕೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಅವರು ಬಿಟ್ಟು ಇವರು, ಇವರು ಬಿಟ್ಟು ಅವರು. ಮಾಧ್ಯಮಗಳು ಇವುಗಳ ಸುತ್ತಲೇ ಚರ್ಚೆಯನ್ನು ಕೇಂದ್ರೀಕರಿಸಿವೆ. 2025 ಪ್ರಾರಂಭವಾದರೂ ಸಾಮಾನ್ಯ ಜನರು ಮಾತ್ರ ಏನು ಅರಿಯದ ಮುಗ್ಧರೋ, ಮೂರ್ಖರೋ ಎಂಬಂತಾಗಿದೆ…..

ಈ ಸ್ವಾರ್ಥಿಗಳ ನಡುವೆ ನಾವು ಮಾಡುವುದಾದರೂ ಏನು ? ಈ ಬೃಹತ್ ದೇಶದಲ್ಲಿ ಜನಜಾಗೃತಿ ತುಂಬಾ ಕಷ್ಟ. ಇಲ್ಲಿನ ಸಾಮಾಜಿಕ ರಚನೆಯೇ ತುಂಬಾ ಅಸಮತೋಲನ ಮತ್ತು ವಿಭಜನಾತ್ಮಕ ಮನಸ್ಥಿತಿಯನ್ನು ಹೊಂದಿದೆ. ಅದಕ್ಕೆ ಪರ್ಯಾಯವಾಗಿ ಅಧಿಕಾರಸ್ಥ ರಾಜಕಾರಣಿಗಳೇ ಹೆಚ್ಚು ಜಾಗೃತರಾದರೆ ಅದು ಅತ್ಯುತ್ತಮ ಬೆಳವಣಿಗೆಯಾಗುತ್ತದೆ…..

ಆ ರೀತಿಯ ರಾಜಕಾರಣಿಗಳ ಅರಿವಿಗಾಗಿ ಇಲ್ಲೊಂದಿಷ್ಟು ಮಾಹಿತಿ…….ಭಾರತದ ರಾಜಕಾರಣಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕಾದ ಮತ್ತು ಅರಿತುಕೊಳ್ಳಬೇಕಾದ ಮೂಲಭೂತ ವಿಷಯಗಳು ನಮ್ಮ ದೇಶದ ಸಾಹಿತ್ಯ ಮತ್ತು ಇತಿಹಾಸದಲ್ಲಿಯೇ ಬಹಳಷ್ಟು ಅಡಕವಾಗಿದೆ………….

ಕೌಟಿಲ್ಯನ ( ಚಾಣಕ್ಯ ) ಅರ್ಥಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ ಮುಖ್ಯವಾಗಿ ಆಡಳಿತಾತ್ಮಕ ರಾಜನೀತಿಯನ್ನು, ರಾಜ್ಯದ ರಕ್ಷಣೆಯನ್ನು  ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ…..

ವೇದವ್ಯಾಸರು ಬರೆದ ಮಹಾಭಾರತದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಯನಿಗೆ ಪ್ರಜೆಗಳ ಯೋಗಕ್ಷೇಮ ಹೇಗೆ ನೋಡಿಕೊಳ್ಳಬೇಕು ಎಂದು ಅರ್ಥಗರ್ಭಿತವಾಗಿ ಹೇಳುತ್ತಾರೆ……

ವಾಲ್ಮೀಕಿಯವರು ಬರೆದ ರಾಮಾಯಣದಲ್ಲಿ ಶ್ರೀರಾಮನ ಆಡಳಿತದಲ್ಲಿ ಹೇಗೆ ಪ್ರಜೆಗಳು ಬಯಸುವ ಕಲ್ಯಾಣರಾಜ್ಯ ಇರಬೇಕು ಎಂದು ನಿರ್ದಿಷ್ಟವಾಗಿ ಹೇಳುತ್ತಾರೆ….

 ಬಸವಣ್ಣನವರ ಅನುಭವ ಮಂಟಪದ ವಚನಗಳು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಿಕೆ, ಸಮ ಸಮಾಜದ ಕನಸನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ಹೇಳುತ್ತದೆ….

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಬಹುತೇಕ ಗ್ರಂಥಗಳು ಒಂದು ರಾಷ್ಟ್ರದ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರಮೋಚ್ಚ ವಾಸ್ತವಗಳಾಗಿ ನಿಲ್ಲುತ್ತವೆ….

ವಿವೇಕಾನಂದರ ಆಧ್ಯಾತ್ಮಿಕ, ಸಾಂಸ್ಕೃತಿಕ ಸಂದೇಶಗಳು ಒಬ್ಬ ರಾಜಕಾರಣಿಯು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ರಾಜನೀತಿಯನ್ನು ಖಚಿತವಾಗಿ ಹೇಳುತ್ತದೆ……

ಗೌತಮ ಬುಧ್ಧರ ಸಂದೇಶಗಳು ವ್ಯಕ್ತಿಯ ಆಂತರಿಕ ಶುಧ್ದತೆಯ ಮಹತ್ವವನ್ನು ಎತ್ತಿಹಿಡಿಯುತ್ತದೆ……ಮಹಾತ್ಮ ಗಾಂಧಿಯವರ ಬದುಕೇ ಸಮಾಜ ಸೇವೆಯ ಪಾರದರ್ಶಕತೆ ಮತ್ತು ನಿಸ್ವಾರ್ಥತೆಗೆ ಉದಾಹರಣೆಯಾಗಿ ನಿಲ್ಲುತ್ತದೆ…..

ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಅವರ ಚಿಂತನೆಗಳು ಸದ್ಯದ ಆಡಳಿತಗಾರರಿಗೆ ಅತ್ಯುತ್ತಮ ಮಾರ್ಗದರ್ಶನ ಮಾಡುತ್ತವೆ……

ಇದಲ್ಲದೆ  ನಮ್ಮನ್ನಾಳಿದ ಅನೇಕ  ರಾಜಮಹಾರಾಜರ ಬಗೆಗಿನ ಮಾಹಿತಿ, ದಾರ್ಶನಿಕರ ಹಿತವಚನಗಳು ಭಾರತೀಯ ಮನಸ್ಥಿತಿಯನ್ನು ಗುರುತಿಸಲು ಸಹಾಯಕವಾಗುತ್ತದೆ…..

ರಾಜಕೀಯ ಮತ್ತು ಸಾರ್ವಜನಿಕ ಸೇವೆಗೆ ಪ್ರವೇಶಿಸುವ ಪ್ರತಿಯೊಬ್ಬರೂ ಇವುಗಳನ್ನು ಕೂಲಂಕುಷವಾಗಿ ಓದಿ ಅದನ್ನು ಸರಿಯಾಗಿ ಗ್ರಹಿಸಿ, ಅಳವಡಿಸಿಕೊಂಡಿದ್ದೇಯಾದರೆ ಭಾರತ ಸಾಮಾಜಿಕ ಮತ್ತು ರಾಜಕೀಯದ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರ ಕಂಡುಕೊಳ್ಳುತ್ತವೆ………

ಅಧಿಕಾರ ಕೇಂದ್ರಕ್ಕೆ ಹತ್ತಿರವಿರುವವರು ಇದನ್ನೆಲ್ಲಾ ಅರ್ಥ ಮಾಡಿಕೊಂಡರೆ ಅವರ ಮನಸ್ಥಿತಿಗಳು ಜಾಗೃತವಾಗಿ ಅವರಲ್ಲಿ ತಮಗರಿವಿಲ್ಲದೆ ಸೂಕ್ಷ್ಮ ಸಂವೇದನೆಗಳು ಉಂಟಾಗಿ ವಿವೇಚನೆ ಬೆಳೆಯುತ್ತದೆ…….

ದುರಾದೃಷ್ಟವೆಂದರೆ ಇದನ್ನೆಲ್ಲಾ ತಿಳಿದ ವ್ಯಕ್ತಿಗಳು ಈ ವ್ಯವಸ್ಥೆಯಿಂದ ದೂರವಾಗಿ ಸಿನಿಕರಾದರೆ, ಇದನ್ನು ಅರಿಯದ ರಾಜಕಾರಣಿಗಳು ಹಣ, ಜಾತಿಯ ಚುನಾವಣಾ ರಾಜಕೀಯದಲ್ಲಿ ಮತ ಪಡೆದು, ಗೆದ್ದು ನಮ್ಮನ್ನು ಆಳುತ್ತಾರೆ…..

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತೆ ನಮ್ಮಲ್ಲಿಯೇ ಅತ್ಯುತ್ತಮ ಆಡಳಿತದ ಮಾದರಿಗಳಿರುವಾಗ ಅದನ್ನು ಗಮನಿಸುತ್ತಿಲ್ಲ…..

ಕನಿಷ್ಠ ಮುಂದಿನ ದಿನಗಳಲ್ಲಾದರೂ ಈ ಆಧುನಿಕ ಕಾಲದಲ್ಲಿ ಆಡಳಿತದ ಬಗ್ಗೆ ಸಂಪೂರ್ಣ ತಿಳಿದಿರುವ, ಮಾನವೀಯ ಮುಖದ ರಾಜಕಾರಣಿಗಳು ನಮ್ಮನ್ನು ಆಳುವಂತಾಗಿ ಈ ದೇಶ ವಿಶ್ವ ಭೂಪಟದಲ್ಲಿ ಮಹತ್ವದ ಸ್ಥಾನ ಹೊಂದಲಿ ಎಂಬ ಆಶಯದೊಂದಿಗೆ ……………
ಲೇಖನ-ವಿವೇಕಾನಂದ. ಎಚ್. ಕೆ. 9844013068………

 

- Advertisement -  - Advertisement - 
Share This Article
error: Content is protected !!
";