ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸತ್ಯಕಥೆ
ಉರಿ ಬಿಸಿಲಿಗೆ ಉರುಳಿಸಿ
ಬೂಟು ಚಾಟೀಲಿ ಮಡಿ ಮಾಡಿ
ಕುಸುಮ ಕುಡಿಗಳ ಕಣ್ಣೀರ
ಬಸಿದು ಬತ್ತಿಸಿದ ಕಥೆ…
ದೇವರಿಗಾದ ಪೂಜೆ
ಪೂಜೆಯೇ ಅಲ್ಲಂತೆ
ಹೊಸ್ತಿಲು ಮೆಟ್ಟಿದ್ದಕ್ಕೇ
ಅವನು ಉಗ್ರನಂತೆ
ಊರಿಗೆ ಕೇಡು ಬಂತಂತೆ
ಮೂಲ ದೈವವ ಮುಟ್ಟಿದ್ದೇ ತಪ್ಪಂತೆ
ಕಲ್ಲು ದೇವರಿಗೆ ವ್ಯರ್ಥದ ಪೂಜಾರಿಗಳು
ಬೀದಿ ಡಂಗೂರ ಬಡಿಸಿದರು
ಮಾಸಿದ ಪೂಜೆಗೆ
ಮಹಾದೈವ ಕುಪಿತನಂತೆ
ಹಿಡಿದು ಕಟ್ಟಿಸಿದರು
ನನ್ನವರನ್ನ ಓಣಿಯಿಂದ ಹೊರಗಿಟ್ಟು
ನನ್ನನ್ನ ಬಡಿಸಿದರು
ನನ್ನವಳ ಎಳೆ ಮಕ್ಕಳ ಹಿಂಸಿಸಿದರು
ಇವೆಲ್ಲವೂ
ದೈವ ಬಂದ ಪೂಜಾರಿಯೇ
ಮೈದುಂಬಿ ಹೇಳಿದ್ದಂತೆ
ತೊಟ್ಟಿಕ್ಕಿದ ರಕ್ತವ
ನೆಲ ಕುಡಿಯಲು ಬಿಟ್ಟಿದ್ದು
ನನ್ನಂತಹ ರೂಪಗಳೇ
ಜಾತಿಯ ಕೋವಿಗಳು
ಅಟ್ಟಹಾಸದಿ ಮೆಟ್ಟಿ
ನೋವಿಟ್ಟು ಗಹಿಗಹಿಸಿ
ಅದಕೆ ನಮಿಸುತ್ತಲೇ
ಮೈಲಿಗೆಯನ್ನ ಮಡಿ ಮಾಡಿದ್ದೇವೆ
ನಮ್ಮನ್ನು ಉಳಿಸೆಂದಾಗ
ಕಲ್ಲಿಗಿಟ್ಟ ಹೂವುಗಳು
ನೆಲಕುದುರಿದ್ದವು
ನಾ ಕಂಡಂತೆ
ಅದ ತಂದ ಪೂಜಾರಿ ನನಗೆಸೆದು
ದೇವ ಪ್ರಸನ್ನ ವದನ
ಮುಂದಾದರು
ಈ ಪಾಪಗಳಾಗದಿರಲಿ ಎಂದು
ತೀರ್ಥವ ಮೈಯಿಗೆ ಎರಚಿದ್ದು
ಹೃದಯಕ್ಕಾದ ಮಾಸದ ಗಾಯಗಳು
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.