ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೇ.60ರಷ್ಟು ಕಮಿಷನ್ ಗಾಗಿ ಸರ್ಕಾರದಿಂದ ಗುತ್ತಿಗೆದಾರರಿಗೆ ಟಾರ್ಚರ್ ಭಾಗ್ಯ!! ನೀಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಬಾಕಿ ಬಿಲ್ ಪಾವತಿಯಾಗದ ಕಾರಣ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಈಗ ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿರುವುದು ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶೇ.60ರಷ್ಟು ಕಮಿಷನ್ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ದೂರಿದೆ. ಪತ್ರದಲ್ಲಿ ಭ್ರಷ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಮತ್ತೊಮ್ಮೆ ಉಲ್ಲೇಖವಾಗಿದೆ. ಅಲ್ಲದೇ ಶಾಸಕ ಎಸ್.ಬಿ.ಅಚ್ಚೆಗೌಡ ಹೆಸರು ಸಹ ಪ್ರಸ್ತಾಪವಾಗಿದೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಬಳಿಕವೂ ಸಚಿವರ ಹಣದ ದಾಹ ತಣಿದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಇಡೀ ಸರ್ಕಾರಿ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಬೆದರಿಸುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಂದಲೂ ಸಹ ಗುತ್ತಿಗೆದಾರರ ಜೀವ ಹಿಂಡುವ ಕೆಲಸ ಈ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರರ, ವೆಂಡರ್ಸ್‌ಗಳ ಬಾಕಿ ಹಣ ಪಾವತಿಸಿ ಎಂದು ಬಿಜೆಪಿ ಆಗ್ರಹ ಮಾಡಿದೆ.