ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿಯ ಸುತ್ತಮುತ್ತಲ 2,100 ಎಕರೆ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಯಿಂದ ಭೂಸ್ವಾಧೀನ ವಿರೋದಿಸಿ ದೊಡ್ಡಬೆಳವಂಗಲ ಕೃಷಿ ಭೂಸ್ವಾಧೀನ ವಿರೋದ ಹೋರಾಟ ಸಮಿತಿ ಚಿಕ್ಕ ಬೆಳವಂಗಲದಿಂದ ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಛೇರಿ ವರೆವಿಗೂ ಟ್ರಾಕ್ಟರ್ ಜಾಥಾ ನಡೆಸಲಾಯಿತು.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊಣ್ಣೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ದೊಡ್ಡಬೆಳವಂಗಲ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿಗೆ ಟ್ರ್ಯಾಕ್ಟರ್‌ಛಲೋವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆ ನೂರಾರು ಟ್ರ್ಯಾಕ್ಟರ್ ಮೂಲಕ ಚಿಕ್ಕಬೆಳವಂಗಲದಿಂದ ತಾಲೂಕು ಕಚೇರಿಗೆ ಸಾವಿರಾರು ರೈತರು ಬಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ ಸರ್ಕಾರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ನಮ್ಮ ಜಮೀನುಗಳನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ನಾವು ನಮ್ಮ ಭೂಮಿಯಲ್ಲಿ ಅಡಿಕೆ, ತೆಂಗು, ಸೀಬೆ, ದ್ರಾಕ್ಷಿ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇಂತಹ ಭೂಮಿಯನ್ನು ನಮ್ಮಂದಿ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ದೇಶದ ಬೆನ್ನೆಲುಬು, ಎಲ್ಲಾ ಸರ್ಕಾರಗಳು ರೈತರಿಂದ ಭೂಮಿಯನ್ನು ಬಲವಂತವಾಗಿ ಕಬಳಿಸಿ ರೈತರ ಬೆನ್ನು ಮುರಿಯುವ ಕೆಲಸ ಮಾಡುತ್ತಿವೆ. ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಪರಿಸರ ಸಮತೋಲನವಾಗಿರಬೇಕು ಆಗ್ರಹಿಸಿದರು.

