ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ. ನಾಯಿ ಕಡಿತದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತನ್ನ ತಂದೆ-ತಾಯಿ ಜತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಹಸುಕಂದ ಹೀಗೆ ಅಕಾಲ ಮರಣಕ್ಕೆ ತುತ್ತಾಗಿರುವುದು ನನ್ನ ಮನಸ್ಸನ್ನು ಕಲಕಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಕುಮಾರಸ್ವಾಮಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಏಕಾಏಕಿ ರಸ್ತೆಯಲ್ಲಿ ತಡೆದು ನಿಲ್ಲಿಸುವ ಅಥವಾ ಅವರಿಗೆ ಗಾಬರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ ಮಗುವಿನ ಸಾವನ್ನು ತಪ್ಪಿಸಬಹುದಿತ್ತು. ಭವಿಷ್ಯದಲ್ಲಿ ಇಂಥ ಅಚಾತುರ್ಯದ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು.
ಸಾರ್ವಜನಿಕರು ಕೂಡ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಮ್ಮ ಜೀವದ ರಕ್ಷಣೆಗಾಗಿಯೇ ನಿಯಮಗಳನ್ನು ಮೀರಬಾರದು ಎಂಬುದು ನನ್ನ ವಿನಮ್ರ ಮನವಿ. ಈ ನಿಟ್ಟಿನಲ್ಲಿ ಪೊಲೀಸರು ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು ಎಂದು ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ.
ಮೃತಪಟ್ಟ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.
ಮಂಡ್ಯ ಸಂಚಾರಿ ಪೊಲೀಸರೇ ಈ ಸಾವು ನ್ಯಾಯವೇ ? ಎಂದು ಪೊಲೀಸ್ ಇಲಾಖೆಯನ್ನು ಅವರು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ-ಮಂಡ್ಯದ ಸ್ವರ್ಣಸಂದ್ರದಲ್ಲಿ ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿಗೆ 3 ವರ್ಷದ ಮಗು ಬಲಿಯಾಗಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಸಂಚಾರಿ ಪೊಲೀಸರ ಈ ಅಮಾನವೀಯ ವರ್ತನೆ ಖಂಡನೀಯ.
ಹೆಲ್ಮೆಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ಅಡ್ಡ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ತಂದೆ ತಾಯಿ ಜೊತೆಯಲ್ಲಿ ಪಯಣಿಸುತ್ತಿದ್ದ ಮಗು ರಸ್ತೆಗೆ ಬಿದ್ದು, ತಲೆಗೆ ಪೆಟ್ಟಾಗಿ ಮೃತಪಟ್ಟಿದೆ.
ಈ ಸಾವಿಗೆ ಸಂಚಾರಿ ಪೊಲೀಸರೇ ನೇರ ಹೊಣೆ. ಕರ್ನಾಟಕ ಡಿಜಿಪಿ ಕೂಡಲೆ ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಅಪರಾಧ. ಸಂಚಾರಿ ನಿಯಮ ಉಲ್ಲಂಘಿಸಿದ ಸವಾರರ ಮನೆಗೆ ನೋಟಿಸ್ ನೀಡಿ ದಂಡ ಕಟ್ಟಿಸಿಕೊಳ್ಳಿ. ಅದನ್ನು ಬಿಟ್ಟು ಚಲಿಸುತ್ತಿರುವ ವಾಹನಗಳನ್ನು ತಪಾಸಣೆ ನೆಪದಲ್ಲಿ ಅಡ್ಡ ಹಾಕುವುದು ಸವಾರರ ಜೀವಹಾನಿಯ ಜೊತೆಗೆ ಅಪಘಾತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.