ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಜೀವ ರಕ್ಷಿಸಿಕೊಳ್ಳಿ-ಪಿಎಸ್ಐ ಪ್ರಸಾದ್

News Desk

ಚಂದ್ರವಳ್ಳಿ ನ್ಯೂಸ್, ಭರಮಸಾಗರ:
ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ಮತ್ತು ಅಪಘಾತಗಳನ್ನು ಗಮನಿಸಿ ಭರಮಸಾಗರ ಪೊಲೀಸ್ ಠಾಣೆಯು ಇಂದು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಿತು.

ಪೊಲೀಸ್ ಇನ್ಸ್ಪೆಕ್ಟರ್ ಪ್ರಸಾದ್ ಅವರ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಾಗೂ ಬಡಾವಣೆ ಪ್ರದೇಶಗಳಲ್ಲಿ ವಾಹನ ಸವಾರರಿಗೆ ನೇರವಾಗಿ ಮಾಹಿತಿ ನೀಡಲಾಯಿತು.

- Advertisement - 

ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಹೆಲ್ಮೆಟ್ ಧರಿಸದೆ ವಾಹನ ಚಲಿಸುವಿಕೆ, ಸೀಟ್‌ಬೆಲ್ಟ್ ಬಳಸದಿಕೆ, ವೇಗ ಮಿತಿ ಮೀರಿ ಓಡುವಿಕೆ, ಮೊಬೈಲ್ ಬಳಸುತ್ತ ಚಾಲನೆ ಮಾಡುವಿಕೆಯ ಅಪಾಯ ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡಿದರೆ ಎದುರಿಸಬೇಕಾಗುವ ಕಾನೂನು ಕ್ರಮಗಳ ಬಗ್ಗೆ ಪೊಲೀಸರು ವಿವರಿಸಿದರು. ಅಪ್ರಾಪ್ತರಿಗೆ ವಾಹನ ನೀಡುವಿಕೆಯ ಗಂಭೀರತೆಯನ್ನೂ ಚಾಲಕರಿಗೆ ತಿಳಿಸಲಾಯಿತು.

- Advertisement - 

ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಪೊಲೀಸ್ ಇಲಾಖೆಯೊಂದಿಗೆ ನಾಗರಿಕರ ಸಹಭಾಗಿತ್ವದಿಂದಲೇ ಸಾಧ್ಯ ಎಂದು ಇನ್ಸ್ಪೆಕ್ಟರ್ ಪ್ರಸಾದ್ ಹೇಳಿದರು.
ಮೋಟಾರು ವಾಹನ ಕಾಯ್ದೆಯಡಿ ವಿಧಿಸಲ್ಪಡುವ ದಂಡದ ವಿವರಗಳನ್ನೂ ಚಾಲಕರಿಗೆ ನೀಡಲಾಯಿತು.

ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ವ್ಯಾಪಾರಸ್ಥರು ಮತ್ತು ವಾಹನ ಸವಾರರು ನಿಯಮ ಪಾಲನೆಗೆ ಒಲವು ತೋರಿದರು. ರಸ್ತೆ ಅಪಘಾತಗಳ ತಡೆಗೆ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

 

 

Share This Article
error: Content is protected !!
";