ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಕುರುಬರಹಳ್ಳಿ ಗ್ರಾಮಗಳಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂ ವತಿಯಿಂದ ರೈತಭಾಂದವರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಚಿತ್ರದುರ್ಗ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ಮಾತನಾಡಿ ಸುಸ್ಥಿರ ಕೃಷಿ ಮತ್ತು ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಕೃಷಿ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳುವುದರ ಜೊತೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಲಾಗುವ ತಾಂತ್ರಿಕ ತರಬೇತಿಗಳ ಪ್ರಯೋಜನೆ ಪಡೆಯಲು ಮನವಿ ಮಾಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಆರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಷಯಗಳ ಕುರಿತು ಆಯೋಜಿಸಲಾಗುತ್ತಿರುವ ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ, ಆನ್‌ಲೈನ್ ತರಬೇತಿಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕೃಷಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜದ ಮಹತ್ವ ಹಾಗೂ ಬೆಳೆಯ ಪ್ರಾರಂಭದ ಹಂತದಲ್ಲಿ ಬರುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ಬೀಜೋಪಚಾರ ಅತ್ಯವಶ್ಯಕವೆಂದರು. ಕಡಲೆ, ಹುರುಳಿ, ಅಲಸಂಧೆ ಬೆಳೆಗಳಲ್ಲಿ ಸೊರಗು ರೋಗ ನಿರ್ವಹಣೆಗೆ ಕಾರ್ಬನ್ಡೈಜಿಮ್ @ ೨ ಗ್ರಾಂ/ಕೆಜಿ ಬೀಜಕ್ಕೆ ಅಥವಾ ಟ್ರೈಕೋಡರ್ಮಾ @ ೪-೧೦ ಗ್ರಾಂ/ಪ್ರತಿ ಕೆಜಿ ಬೀಜಕ್ಕೆ ಹಾಕಿ ಬೀಜೋಪಚಾರ ಮಾಡುವುದು.

ಹಾಗೆ ಸೂಕ್ಷ್ಮಾಣುಜೀವಿಗಳನ್ನು ಬಳಸಿ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಸಾರಜನಕ ಸ್ಥೀರಿಕರಿಸುವ ಜೀವಾಣುಗಳಾದ ಅಜೋಸ್ಪರಿಲಂ, ಅಜೊಟೊಬ್ಯಾಕ್ಟರ್‌ರನ್ನು ಏಕದಳ ಧಾನ್ಯಗಳಾದ ರಾಗಿ, ಗೋಧಿ, ಮುಸುಕಿನ ಜೋಳ ಹಾಗೂ ರೈಜೋಬಿಯಂವನ್ನು ಬೇಳೆಕಾಳು ಬೆಳೆಗಳಾದ ಹುರಳಿ, ಅಲಸಂದೆ, ಕಡಲೆ ಮುಂತಾದ ಬೆಳೆಗಳಲ್ಲಿ  ಬೀಜೋಪಚಾರಕ್ಕೆ ಬಳಸಬಹುದು. ರಂಜಕ ಕರಗಿಸುವ ಜೀವಾಣುಗಳು (ಪಿ.ಎಸ್.ಬಿ) ಎಲ್ಲಾ ಬೆಳೆಗಳಿಗೂ ಬಳಸಬಹುದು.

ಸುರಕ್ಷಿತ ಪೀಡೆನಾಶಕಬಳಕೆ ಕುರಿತು ಮಹಿತಿ ನೀಡುತ್ತಾ, ಯಾವುದೇ ಕೀಟನಾಶಕವನ್ನು ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ (ಲೇಬಲ್) ಯನ್ನು ಓದಬೇಕು. ಸಿಂಪರಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆಗಳನ್ನು ಧರಿಸಬೇಕು. (ಕನ್ನಡಕ, ಮುಖವಾಡ, ಕೈ ಹೊದಿಕೆ ಮುಂತಾದವುಗಳು). ಸೋರುವ ಅಥವಾ ಹಾನಿಯಾಗಿರುವ ಸಿಂಪರಣಾ ಯಂತ್ರ (ಸೈಯರ್) ವನ್ನು ಉಪಯೋಗಿಸಬಾರದು.

ಆಲಿಕೆಯನ್ನು ಉಪಯೋಗಿ ಕೀಟನಾಶಕವನ್ನು ತುಂಬುವಾಗ ಅದು ಹೊರ ಚೆಲ್ಲದಂತೆ ನೋಡಿಕೊಳ್ಳಬೇಕು. ಗಾಳಿ ಬೀಸುತ್ತಿರುವ ದಿಕ್ಕಿನಿಂದಲೇ ಕೀಟನಾಶಕ ದ್ರಾವಣವನ್ನು ಸಿಂಪಡಿಸಬೇಕು ಮತ್ತು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಿಂಪಡಿಸಬಾರದು. ಕೀಟನಾಶಕ ಉಸಿರಿನೊಡನೆ ಒಳಗೆ ಹೋಗುವುದನ್ನು ತಡೆಯಲು ಯಾವಾಗಲೂ ಸೊಂಟದಿಂದ ಕೆಳಮಟ್ಟದಲ್ಲಿ ಸಿಂಪಡಿಸಬೇಕು.

ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆ ಬದಲಾಯಿಸಬೇಕು. ಆನಂತರ ಆಹಾರ ಮತ್ತು ನೀರನ್ನು ಸೇವಿಸಬೇಕು. ಹಾಗೂ ಸಿಂಪರಣಾ ಸಮಯದಲ್ಲಿ ಉಪಯೋಗಿಸಿದ ಬಟ್ಟೆಯನ್ನು ಸ್ವಚ್ಛಗೊಳಿಸಬೇಕು. ಸಿಂಪರಣಾ ಸಮಯದಲ್ಲಿ ಎಲೆ-ಅಡಿಕೆ ಜಗಿಯಬಾರದು ಮತ್ತು ಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಲ್ಲಿ ಸಿಂಪಡಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು.

ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿಗದಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು. ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಆಹಾರ ಧಾನ್ಯ ಸಂಗ್ರಹಿಸಲು ಉಪ ಯೋಗಿಸಬಾರದು. ಖಾಲಿಯಾದ ಡಬ್ಬವನ್ನು ನಾಶಪಡಿಸಿ ಮತ್ತು ನೆಲದೊಳಗೆ ಅದನ್ನು ಹೂತು ಹಾಕಬೇಕೆಂದರು.

ಆರೋಗ್ಯಕರ ಸ್ವಾವಲಂಬನೆ ಜೀವನ ನಡೆಸಲು ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಲು ಅನವಶ್ಯಕವಾಗಿ ರಸಾಯನಿಕ ಗೊಬ್ಬರ ಬಳಕೆಮಾಡದೆ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳಿಂದ ಕಾಂಪೋಷ್ಟ್ ಅಥವಾ ಎರೆಹುಳು ಗೊಬ್ಬರ ತಯಾರಿಸಿ ಬಳಸಬೇಕೆಂದರು. ಹಾಗೂ ಆರೋಗ್ಯಕರ ಜೀವನ ನಡೆಸಲು ರೈತರು ಕುಟುಂಬಕ್ಕೆ ಬೇಕಾದ ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ತಮ್ಮ ಜಮೀನು ಅಥವಾ ಹಿತ್ತಲಿನಲ್ಲಿ ಕನಿಷ್ಟ ೧ ಅಥವಾ ೨ ಗುಂಟೆ ಜಮೀನಿನಲ್ಲಿ ಪೌಷ್ಠಿಕ ಕೈತೋಟ ಮಾಡಿಕೊಳ್ಳುವುದು ಉತ್ತಮವೆಂದರು.

ಹುಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ ಮಾತನಾಡಿ ರೈತರು ಸಿರಿಧಾನ್ಯಗಳನ್ನು ಬೆಳೆಯುವುದಲ್ಲದೆ ಅವುಗಳ ಬಳಕೆಗೆ ಒತ್ತು ನೀಡಬೆಕೇಂದರು. ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಚೌಧರಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರದ ಜೊತೆಗೆ ದ್ವಿದಳ ಧಾನ್ಯಗಳ ಬಳಕೆ ಅವಶ್ಯಕವೆಂದರು.

ರಾಗಿ ಮತ್ತು ಸಾಮೆ ಬೆಳೆಯ ಕ್ಷೇತ್ರೋತ್ಸವದಲ್ಲಿ ರೈತರು ಪಾಲ್ಗೊಂಡರು.
ಸದರಿ ತರಬೇತಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್
, ಪ್ರವೀಣ್ ಚೌಧರಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಖ್ಯಸ್ಥ ರಜನೀಕಾಂತ ಆರ್, ಹಿರೇಗುಂಟನೂರು ಹೋಬಳಿಯ ಕೃಷಿ ಆಧಿಕಾರಿ ಧನರಾಜ್, ಭೀಮಸಮುದ್ರ ಕೆರೆ ಅಭಿವೃದ್ದಿ ನಿರ್ದೇಶಕ ಷಂಶುದ್ದೀನ್ ಹುಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ, ಆತ್ಮ ಯೋಜನೆ ಮತ್ತು ಕೃಷಿ ಸಂಜೀವಿನಿ ಸಿಬ್ಬಂದಿಯವರು ಭಾಗವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";