ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಗಸ್ಟ್ 01ರಂದು ಬೆಳಿಗ್ಗೆ 10ಕ್ಕೆ ಜಿಲ್ಲೆಯ ರೈತರಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಎನ್ಸಿ (ಬಿ.ಇ.ಇ) ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಗಳ ಸಹಯೋಗದಲ್ಲಿ ಬಿಇಇ ಸ್ಟಾರ್ ಲೇಬಲ್‍ವುಳ್ಳ ಇಂಧನದಕ್ಷ ಪಂಪ್‍ಸೆಟ್ ಬಳಕೆ ಮತ್ತು ಜಲ ಸಂರಕ್ಷಣೆ ಜಾಗೃತಿ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡಾ. ರಾಜಶೇಖರ್ ಭಾರ್ಕೇರ ಅವರು ಬಿಇಇ ಸ್ಟಾರ್ ಲೇಬಲ್ ಹೊಂದಿರುವ ಹೆಚ್ಚು ವಿದ್ಯುತ್ ದಕ್ಷಯುಳ್ಳ ಪಂಪ್‍ಸೆಟ್‍ಗಳ ಕುರಿತು ವಿಷಯ ಮಂಡನೆ ಮಾಡುವರು. ಅಂತರ್ಜಲ ಮತ್ತು ಮಳೆ ನೀರು ಕೊಯ್ಲು ತಜ್ಞರಾದ ಡಾ.ಎನ್.ದೇವರಾಜರೆಡ್ಡಿ ಅವರು ಮಳೆನೀರು ಕೊಯ್ಲು-ಸಂಗ್ರಹಣೆ, ಸಂರಕ್ಷಣೆ ಮತ್ತು ಮಿತ ಬಳಕೆ ಕುರಿತು ಮಾಹಿತಿ ನೀಡುವರು.
ನೇಟಫಿಮ್ ಸಂಸ್ಥೆಯ ಬೇಸಾಯಶಾಸ್ತ್ರಜ್ಞರಾದ ಅಂಜಿನಪ್ಪ ಅವರು ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗೆ ಹನಿ ಮತ್ತು ತುಂತುರು ನೀರಾವರಿ ತಾಂತ್ರಿಕತೆ ಕುರಿತು ವಿಷಯ ಮಂಡನೆ ಮಾಡುವರು.
ಸೆಲ್ಕೋ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ ಭಾಗವತ್ ಅವರು ಸೂರ್ಯಘರ್‍ಯೋಜನೆ, ಸೋಲಾರ್ ಪಂಪ್‍ಸೆಟ್‍ನ ಪಿಎಂ ಕುಸುಮ್‍ಯೋಜನೆ ಹಾಗೂ ಸೋಲಾರ್ ಆಧಾರಿತ ವಿವಿಧ ಜೀವನೋಪಾಯ ಚಟುವಟಿಕೆಗಳ ಕುರಿತು ಮಾಹಿತಿ ನೀಡುವರು. ತದನಂತರ ಇಂಧನದಕ್ಷ ಕೃಷಿ ಪಂಪ್‍ಸೆಟ್ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗುವುದು.
ಆದ ಪ್ರಯುಕ್ತ ಆಸಕ್ತ 80 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ಮೊದಲು ನೋಂದಾವಣಿ ಮಾಡಿಕೊಂಡ 80 ರೈತಭಾಂದವರು ಫ್ರೂಟ್ಸ್ ಐಡಿ (ಎಫ್ಐಡಿ) ಅಥವಾ ಆಧಾರ್‍ಕಾರ್ಡನೊಂದಿಗೆ ತರಬೇತಿಗೆ ಹಾಜರಾಗಲು ಕೋರಿದೆ.

