ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ್ದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ.
ಸಮರ್ಪಣಾ ಮನೋಭಾವದ ಅಧಿಕಾರಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಮಾಡಲಾಗಿದೆ. ಒಳ್ಳೆಯ ಕೆಲಸ ಮಾಡುವುದು ಈ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಲಬಾರಿನ ಲಾಬಿಗೆ ಮಣಿದು ‘ನಂದಿನಿ‘ ಬ್ರ್ಯಾಂಡ್‌ನ ದೋಸೆ ಮತ್ತು ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುವ ಘೋಷಣೆಯನ್ನು ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ ಎಂದು ಅವರು ಟೀಕಿಸಿದ್ದಾರೆ.
ನಂದಿನಿ ಬ್ರ್ಯಾಂಡ್‌ನ ಮಾರುಕಟ್ಟೆ ಹಾಗೂ ಜನಪ್ರಿಯತೆ ಹೆಚ್ಚಿಸಿದ್ದ ಹಾಗೂ ನಂದಿನಿ ದೋಸೆ ಹಿಟ್ಟು, ರೆಡಿಮೆಡ್ ಇಡ್ಲಿ ಸೇರಿದಂತೆ ಅನೇಕ ಉತ್ಪನ್ನಗಳನ್ನು ಜಾರಿಗೆ ತರಲು ಯೋಜನೆ ರೂಪಿಸಿದ್ದ ದಕ್ಷ ಅಧಿಕಾರಿ ಕೆಎಂಎಫ್‌ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಹಲವು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ನಂದಿನಿ ಬ್ರ್ಯಾಂಡ್‌ನಲ್ಲಿ ಇಡ್ಲಿ, ದೋಸೆ ಹಿಟ್ಟನ್ನು ಬೆಂಗಳೂರು ಕೇಂದ್ರಿತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಟೆಂಡರ್ ಪ್ರಕ್ರಿಯೆ ಮುಗಿದು, ವರ್ಕ್ ಆರ್ಡರ್ ಕೂಡ ಆಗಿತ್ತು ಈ ಸಂದರ್ಭದಲ್ಲಿಯೇ ಕೆಎಂಎಫ್ ಎಂಡಿ ವರ್ಗಾವಣೆ ಮಾಡಿ ಪ್ರಸ್ತಾವನೆಗೆ ತಡೆ ನೀಡಲು ಕೇರಳದ ಲಾಬಿಯೇ ಕಾರಣ ಎನ್ನಲಾಗುತ್ತಿದೆ. ಕೇರಳ ಮೂಲದ ಐಡಿ ದೋಸೆ ಇಡ್ಲಿ ಹಿಟ್ಟಿನ ಬ್ರ್ಯಾಂಡ್‌ನ ಮಾಲೀಕ, ಡಿಕೆಶಿಯ ಬ್ರದರ್ ಮುಸ್ತಾಫ ಅವರ ಒತ್ತಡಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಮಣಿದಿದೆಯಾ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ನಂದಿನಿ ಬ್ರ್ಯಾಂಡ್ ದುಬೈ, ದೆಹಲಿ ಮಾರುಕಟ್ಟೆ ಪ್ರವೇಶ ಮಾಡಿದ್ದು, ಐಎಸ್‌ಎಲ್, ಪ್ರೊ ಕಬಡ್ಡಿ ಮತ್ತು ಅನೇಕ ಅಂತರರಾಷ್ಟ್ರೀಯ ಕ್ರಿಕೆಟ್‌ಪಂದ್ಯಗಳಿಗೆ ಪ್ರಾಯೋಜಕತ್ವ ಪಡೆದಿದ್ದು ಜಗದೀಶ್ ಅವರ ಅವಧಿಯಲ್ಲೇ. ಅಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಕಾಂಗ್ರೆಸ್ ಸರ್ಕಾರ ‘ವಯನಾಡಿ‘ನ ಋಣ ತೀರಿಸುತ್ತಿದೆಯಾ? ಎಂದು ಸಂಸದೆ ಪ್ರಿಯಾಂಕ ಗಾಂಧಿ ಅವರ ಹೆಸರೇಳದೆ ವಿಜಯಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಗಾಂಧಿ ಕುಟುಂಬದ ಒಲೈಕೆಗಾಗಿ ವಯನಾಡು ಲೋಕಸಭಾ ಉಪ ಚುನಾವಣೆ ಪ್ರಚಾರದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೂಕ್ಷ್ಮ ಪ್ರದೇಶವಾದ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ವಾಪಾಸ್ ಪಡೆಯುವ ಕುರಿತು ಹೇಳಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ಅದೇ ವಯನಾಡಿನ ಲಾಬಿಗೆ ನಂದಿನಿ ಬ್ರ್ಯಾಂಡ್ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ನಾಡದ್ರೋಹಿ ಸರ್ಕಾರ! ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.