ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವರು ಹಾಗೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿ ಚರ್ಚಿಸಿದರು.
ಸಾರಿಗೆ ನೌಕರರು ತಮ್ಮ ವಿವಿಧ 13 ಬೇಡಿಕೆಗಳನ್ನು ಮುಂದಿಟ್ಟು, ಮುಷ್ಕರಕ್ಕೆ ಕರೆ ನೀಡಿದ್ದರು. ಈ ಎಲ್ಲಾ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಸಮಾಲೋಚಿಸಿ, ಪರಿಹರಿಸುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದ್ದು, ಇದರಿಂದ ನೌಕರರು ಮುಷ್ಕರ ಕೈಬಿಡುವುದಾಗಿ ತಿಳಿಸಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಿರುವ ಹಣದಲ್ಲಿ ರೂ.5,900 ಕೋಟಿಯನ್ನು ಬಾಕಿ ಉಳಿಸಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ನೌಕರರ ಕಷ್ಟವನ್ನು ಮನಗಂಡು ರಾಜ್ಯ ಸರ್ಕಾರ ರೂ.2,000 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಮುಂಬರುವ ಬಜೆಟ್ನಲ್ಲಿ ಬಾಕಿ ಉಳಿದಿರುವ ಹಣವನ್ನು ಬಿಡುಗಡೆಗೊಳಿಸಿ ನೌಕರರ ಹಿತ ಕಾಪಾಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಷ್ಕರ ನಿರ್ಧಾರದಿಂದ ಹಿಂದೆ ಸರಿದಿರುವ ಸಾರಿಗೆ ನೌಕರರಿಗೆ ಧನ್ಯವಾದಗಳನ್ನು ಸಿಎಂ ತಿಳಿಸಿದ್ದಾರೆ. ನಿಮ್ಮ ಅಹವಾಲುಗಳನ್ನು ಸಮಚಿತ್ತದಿಂದ ಆಲಿಸಿ ಪರಿಹರಿಸಲು ಸರ್ಕಾರ ಮುಕ್ತವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.