ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇತನ ಪರಿಷ್ಕರಣೆ, ಹಿಂಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಸಾರಿಗೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ನೌಕರರು ಮತ್ತು ಸರ್ಕಾರದ ನಡುವೆ ನಡೆದ ಸಂಧಾನ ವಿಫಲವಾಗಿದ್ದರಿಂದಾಗಿ ಮಂಗಳವಾರದಿಂದಲೇ ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ.
ಇದರಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಸಾರಿಗೆ ಬಸ್ ಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮತ್ತೊಂದೆಡೆ ಬಿಎಂಟಿಸಿ ನೌಕರರು ಕರ್ತವ್ಯಕ್ಕೆ ಗೈರಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರದ ಎಚ್ಚರಿಕೆಗೆ ಮಣಿದಿರುವ ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬಹುತೇಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಬಸ್ ಸೇವೆ ಇಲ್ಲದಿರುವುದರಿಂದ ಖಾಲಿ ಮೈದಾನದಂತಾಗಿದ್ದ ಬಸ್ ನಿಲ್ದಾಣದಲ್ಲಿಯೇ ಹೋಟೆಲ್, ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರು ಕಾಲ ಕಳೆಯುವಂತಾಗಿದೆ.
ಕರ್ನಾಟಕದ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ಬೆಂಗಳೂರಿನಲ್ಲಿ ಬಸ್ ಸಂಚಾರ ಭಾಗಶಃ ಸ್ಥಗಿತಗೊಂಡಿದೆ. ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯಾಗಿದೆ. ಪರಿಣಾಮವಾಗಿ ಬೆಂಗಳೂರಿನ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ಬಸ್ ಮುಷ್ಕರಕ್ಕೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಮುಖಂಡರೊಂದಿಗೆ ಸರ್ಕಾರ ಮಾತುಕತೆ ಫಲಪ್ರದವಾಗದ ಹಿನ್ನೆಲೆ, ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡಿಕೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ನಡುವೆಯೂ ಸಾರಿಗೆ ನೌಕರರು ಇಂದು ಮುಷ್ಕರ ಆರಂಭಿಸಿದ್ದಾರೆ.
ಶಾಲಾ-ಕಾಲೇಜುಗಳು, ಕಚೇರಿಗಳಿಗೆ ದಿನನಿತ್ಯ ಓಡಾಡುವವರು ಬಸ್ ಸಿಗದೆ ಸಮಸ್ಯೆ ಎದುರಿಸಿದರು.
ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಬಳ್ಳಾರಿ, ದಾವಣಗೆರೆ ಸೇರಿ ರಾಜ್ಯದ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದರು.
ಯಾವುದೇ ಡಿಪೋದಿಂದ ಎಂದಿನಂತೆ ಬಸ್ ಸಂಚರಿಸಲಿಲ್ಲ. ಬದಲಿಗೆ ರಾತ್ರಿ ಹೋಗಿದ್ದ ರೂಟ್ ಬಸ್ ಗಳು ಆಗೊಮ್ಮೆ ಈಗೊಮ್ಮೆ ಬಂದು ಡಿಪೋ ಸೇರುತ್ತಿದ್ದವು. ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಕೂಡಾ ತೀರಾ ವಿರಳವಾಗಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡ ವಿಜಯ್ ಭಾಸ್ಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಸೋಮವಾರ ಸಂಜೆ 7:30ರ ಸುಮಾರಿಗೆ ಹೈಕೋರ್ಟ್ ನೋಟಿಸ್ ಬಂದಿದೆ.
ಜಂಟಿ ಕ್ರಿಯಾ ಸಮಿತಿ ತಕ್ಷಣವೇ ಸಭೆ ಸೇರಲು ಹಾಗೂ ಎಲ್ಲಾ ಕಾರ್ಮಿಕರಿಗೆ ತಿಳಿಸಲು ಯಾವುದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ, ಮುಷ್ಕರ ನಿಗದಿಯಂತೆ ಮುಂದುವರೆಯಿತು. ಈಗ ನಾವು ಹೈಕೋರ್ಟ್ ಮುಂದೆ ಹಾಜರಾಗುತ್ತಿರುವುದರಿಂದ, ಈ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಖಾಸಗಿ ಬಸ್‌ಗಳ ಸಂಚಾರ-
ತುಮಕೂರು: ತುಮಕೂರು ಸೇರಿದಂತೆ ಜಿಲ್ಲೆಯಾದ್ಯಂತ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬಹುತೇಕ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತುಮಕೂರಿನಿಂದ ಬೆಂಗಳೂರಿಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಬಸ್ ಸ್ಥಗಿತವಾಗಿದ್ದರಿಂದ ಅನಿವಾರ್ಯವಾಗಿ ವಾಪಸ್ ತೆರಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಮುಷ್ಕರದ ಮಾಹಿತಿ ಇಲ್ಲದ ಕೆಲವು ವಾಹನಗಳು ಬೆಂಗಳೂರಿನತ್ತ ತೆರಳುತ್ತಿದ್ದವು. ಮುಷ್ಕರದ ಮಾಹಿತಿ ಇರುವ ಪ್ರಯಾಣಿಕರು ಖಾಸಗಿ ಬಸ್‌ಗಳ ಮೊರೆ ಹೋದ ಘಟನೆ ಕೂಡಾ ನಡೆಯಿತು.
ನಿಲ್ದಾಣಕ್ಕೆ ಬಾರದ ಬಸ್ಗಳು-
ದಾವಣಗೆರೆ ನಗರದ ಕೇಂದ್ರ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಯಾವುದೇ ಬಸ್ಗಳು ಬಾರದೇ ನಿಲ್ದಾಣ ಸ್ತಬ್ಧವಾಗಿತ್ತು. ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದ ಜನರು ನಿಲ್ದಾಣದಲ್ಲೇ ಕಾಯುತ್ತಿರುವ ದೃಶ್ಯ ಕಂಡುಬಂದವು. ಬಸ್ ಬಾರದಿರುವುದರಿಂದ ಕೋಪಗೊಂಡ ಪ್ರಯಾಣಿಕರು ಕಂಟ್ರೋಲರ್ಗಳ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ಆನ್ಲೈನ್ ನಲ್ಲಿ ನಾವು ಟಿಕೆಟ್ ಹಣ ಪಾವತಿಸಿ ಬಂದಿದ್ದೇವೆ.
ಬಸ್ ಸಂಚಾರ ಇಲ್ಲ ಅಂದ ಮೇಲೆ ವೆಬ್ಸೈಟ್ನಲ್ಲಿ ಬುಕಿಂಗ್ ಏಕೆ ಮಾಡಿಕೊಳ್ಳಬೇಕು? ದಿಢೀರ್ ಬಸ್ ಇಲ್ಲ ಅಂದರೆ ನಾವು ಊರಿಗೆ ಹೋಗೋದು ಹೇಗೆ? ಅಂತ ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕಿದ ಘಟನೆ ಕೂಡಾ ಜರುಗಿದವು.
ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಬಸಾಪುರ ಪ್ರತಿಕ್ರಿಯಿಸಿ, ನಮ್ಮ ವಿಭಾಗದಲ್ಲಿ 80 ರಿಂದ 90 ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ನೌಕರರ ಹಾಜರಾತಿ ಕಡಿಮೆ ಇದೆ. ಖಾಸಗಿ ಚಾಲಕರು ಬಂದಿದ್ದಾರೆ. ಅವರಿಗೆ ಹೇಳಿ ಬಸ್ ಸಂಚಾರ ಆರಂಭಿಸುತ್ತೇವೆ. 15 ಮಂದಿ ಖಾಸಗಿ ಚಾಲಕರು ಬಂದಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾದರೆ ಖಾಸಗಿ ಬಸ್ ಓಡಿಸಲು ಕೂಡಾ ನಿರ್ಧಾರ ಮಾಡುತ್ತೇವೆ ಎಂದರು.
ದುಪ್ಪಟ್ಟು ಬಸ್ ಚಾರ್ಜ್-
ಬಳ್ಳಾರಿ ಕೆಎಸ್ಆರ್ ಟಿಸಿ ಡಿಪೋದಿಂದ ಬಸ್ಗಳು ಹೊರ ಬರದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಗಡಿ ಜಿಲ್ಲೆಯಾಗಿದ್ದರಿಂದ ಆಂಧ್ರದ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಮಾತ್ರ ನಿಲ್ದಾಣದಲ್ಲಿ ಓಡಾಡುತ್ತಿದ್ದವು. ಉಚಿತ ಪ್ರವಾಸ ನಂಬಿ ಅಧಾರ್ ಕಾರ್ಡ್ ಜೊತೆಗೆ ನಿಲ್ದಾಣಕ್ಕೆ ಬಂದ ಮಹಿಳೆಯರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಟ್ಟೆಪಾಡಿಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಲು ನಿಲ್ದಾಣಕ್ಕೆ ಬಂದಿದ್ದ ಕೆಲ ಕೂಲಿ ಕಾರ್ಮಿಕ ಮಹಿಳೆಯರು ಬಸ್ ಇಲ್ಲದಿರುವುದನ್ನು ಕಂಡು ಬೇಸರ ಹೊರಹಾಕಿದರು.
ನಮ್ಮ ಬಳಿ ಹಣವಿಲ್ಲ, ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ಬೆಂಗಳೂರಿಗೆ ಹೋಗಬೇಕಿತ್ತು. ಬಸ್ ಇಲ್ಲವೆಂದು ಹೇಳುತ್ತಿದ್ದಾರೆ. ಖಾಸಗಿ ಬಸ್ನವರು 800 ರೂಪಾಯಿ ಕೇಳ್ತಿದ್ದಾರೆ. ಎಲ್ಲಿಂದ ತರಬೇಕು? ಹೀಗಾದ್ರೆ ನಾವೇನು ಮಾಡೋದು? ಎಂದು ಪ್ರಶ್ನೆ ಮಾಡಿದರು.
ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಶೇ.5 ರಿಂದ 10 ರಷ್ಟು ಮಾತ್ರ ಬಸ್‌ಗಳ ಕೊರತೆ ಹೊರತುಪಡಿಸಿದರೆ, ಬಹುತೇಕ ಬಿಎಂಟಿಸಿ ಬಸ್ಗಳು ಎಂದಿನಂತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಬಸ್ ಸಂಚಾರಕ್ಕೆ ಹಾನಿ, ಕಲ್ಲು ತೂರಾಟ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಇಳಿಕೆ: ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಭಾವಿಸಿ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳ ಮೂಲಕ ದಿನನಿತ್ಯದ ಕಚೇರಿ ಕೆಲಸಗಳಿಗೆ ಸಾಗಿದರೆ,
ಇನ್ನೂ ಕೆಲವರು ಮೆಟ್ರೊ ರೈಲು ಮೂಲಕ ತಮ್ಮ ಗಮ್ಯ ಸ್ಥಳವನ್ನ ತಲುಪಿದರು. ದೂರದ ಊರಿನಿಂದ ಬಂದಿದ್ದ ಕೆಲವರು ಒಲಾ, ಉಬರ್ ಕ್ಯಾಬ್ ಹಾಗೂ ಆಟೊ ಬುಕ್ ಮಾಡಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಇದರಿಂದ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಕೊರತೆ ಇರುವುದು ಕಂಡುಬಂತು.
ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿರುವ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ನಿತ್ಯ 1200ಕ್ಕೂ ಅಧಿಕ ಟ್ರಿಪ್ಗಳು ಕಾರ್ಯಾಚರಣೆ ನಡೆಸುತ್ತವೆ. ಮುಷ್ಕರದ ನಡುವೆಯೂ ಬಹುತೇಕ ಬಸ್ಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಕೆಲವೆಡೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ.
ಮೊದಲ ಪಾಳಿಯಲ್ಲಿರುವ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಬಂದಿದ್ದಾರೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಮುಷ್ಕರದ ಹಿನ್ನೆಲೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಸ್ವಂತ ವಾಹನ ಬಳಸಿದ್ದರಿಂದ ನಗರದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಯಿತು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯದ ಕಾರಣ ಸಂಚಾರಕ್ಕೆ ಅಡ್ಡಿಯಾಗಿತ್ತು. ಪ್ರತಿನಿತ್ಯ ನೂರಾರು ಬಸ್ ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಸಾರಿಗೆ ಬಸ್ ಗಳು ಇಲ್ಲದಿದ್ದರಿಂದ ಪ್ರಯಾಣಿಕರು ಪರದಾಡಿದರು.
ಶಾಲಾ ಕಾಲೇಜ್ ಗಳಿಗೆ, ಆಸ್ಪತ್ರೆ, ಕೂಲಿ ಕೆಲಸ ಸೇರಿದಂತೆ ಇತ್ಯಾದಿ ನಿತ್ಯ ಕಾರ್ಯಗಳಿಗೆ ಊರಿಂದೂರಿಗೆ ತೆರಳುತ್ತಿದ್ದವರ ಪರಿಸ್ಥಿತಿ ಬಿಗಡಾಯಿಸಿತ್ತು. ಇನ್ನೂ ಅಧಿಕಾರಿಗಳು ಖಾಸಗಿ ವಾಹನಗಳನ್ನು ಹಿಡಿದು ಕಚೇರಿಗೆ ತೆರಳಿದ ಪ್ರಸಂಗ ಕೂಡಾ ಜರುಗಿದವು. ಒಟ್ಟಾರೆ ಸಾರಿಗೆ ಮುಷ್ಕರದ ಬಿಸಿ ಎಲ್ಲರಿಗೂ ತಟ್ಟಿತು.

