ಎಸ್‌ಎಸ್‌ಎಲ್‌ಸಿ ಟಾಪರ್ಸ್​ ಗಳಿಗೆ ಪ್ರವಾಸ ಭಾಗ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ಸ್​ ಆಗಿರುವ 9 ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಪ್ರಯಾಣಿಸುವ ಯೋಗ ಒದಗಿಸಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಐದು ದಿನಗಳ ದೆಹಲಿ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸಬೇಕೆಂಬ ವಿದ್ಯಾರ್ಥಿಗಳ ಕನಸು ನನಸು ಮಾಡಿರುವ ಸಂಸದರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

- Advertisement - 

ತಮ್ಮ ಗೃಹ ಕಚೇರಿಯಲ್ಲಿ ಪ್ರವಾಸಕ್ಕೆ ತೆರಳಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಅನಿಸಿಕೆಗಳನ್ನು ಆಲಿಸಿದ ಸಂಸದರು ಬಳಿಕ, ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ಸೋಮವಾರ ಸಂಜೆ 5-30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳ ತಂಡವು ದೆಹಲಿಗೆ ವಿಮಾನದಲ್ಲಿ ಪ್ರಯಾಣ ಆರಂಭಿಸಲಿದ್ದಾರೆ. ದೆಹಲಿಯಲ್ಲಿ ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯ ಪಥ ಮತ್ತು ಸ್ವಾಮಿನಾರಾಯಣ ಮಂದಿರ ಮುಂತಾದ ರಾಷ್ಟ್ರದ ಪ್ರಮುಖ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಇವರ ಜೊತೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ಕೂಡ ತೆರಳಲಿದ್ದಾರೆ.

- Advertisement - 

ಸಂಸದರ ಸ್ವಂತ ಖರ್ಚಿನಲ್ಲಿ ಪ್ರವಾಸ:
ವಿದ್ಯಾರ್ಥಿಗಳ ದೆಹಲಿ ಪ್ರವಾಸದ ವೆಚ್ಚ
, ವಸತಿ ಊಟ ಸೇರಿ ಎಲ್ಲ ಖರ್ಚನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೇ ಭರಿಸಲಿದ್ದಾರೆ.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವ ಸಲುವಾಗಿ ಈ ಶೈಕ್ಷಣಿಕ ಪ್ರವಾಸದ ಉದ್ದೇಶವಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೇರೇಪಿಸಲು ನಾವು ಉದ್ದೇಶಿಸಿದ್ದೇವೆ. ಹೊನ್ನಾಳಿಯ ಇಬ್ಬರು ಅಸಾಧಾರಣ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಂಡು ಒಟ್ಟಾರೆ ಒಂಬತ್ತು ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರಯಾಣ, ವಿಮಾನ ದರ ಹಾಗೂ ವಸತಿ ಸೇರಿದಂತೆ ಎಲ್ಲಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು. ಈ ಸಾಧನೆ ಮಾಡಿದ ಮಕ್ಕಳನ್ನು ನೋಡುವುದರಿಂದ ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ.

ಅವರು ಕೂಡ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಗಳಿಸಲು ಸ್ಫೂರ್ತಿಯಾಗಲಿದೆ. ಆದ್ದರಿಂದ ಈ ಪ್ರವಾಸ ಏರ್ಪಡಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ದೆಹಲಿ ಪ್ರವಾಸ ಭಾಗ್ಯ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳಾದ ಪಿ. ಮಂಜುನಾಥ್, ಧನುಷ್ ಬಿ. ಎನ್, ಪವನ್ ಕುಮಾರ್ ಕೆ.ಪಿ, ಜೇಷ್ಠ ಬಿ, ಅಮೃತಾ ಟಿ.ಎಂ, ಮಿಸ್ಬಾ ನಾಜ್, ಉಷಾ ಹೆಚ್, ಲತಾ ಹೆಚ್.ಎ ಮತ್ತು ಯೋಗೇಶ್ವರಿ ಜೆ.ಬಿ ದೆಹಲಿ ಪ್ರವಾಸಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳು. ಇವರ ಜೊತೆ ಶಿಕ್ಷಕರಾದ ಬಿ. ಅರುಣ್ ಕುಮಾರ್ ಮತ್ತು ಕೆ.ಎಂ. ನಿಂಗಮ್ಮ ಅವರು ಪ್ರವಾಸಕ್ಕೆ ತೆರಳಲಿದ್ದಾರೆ.

 

 

 

Share This Article
error: Content is protected !!
";