ಸತ್ಯ ಮತ್ತು ಅಹಿಂಸೆ ಬದಲಿಗೆ ದ್ವೇಷ, ಅಸೂಯೆ ತುಂಬಿದೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವಾಗಿರಿಸಿಕೊಂಡು ಬ್ರಿಟೀಷರ ವಿರುದ್ದ ಮಹಾತ್ಮಗಾಂಧಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇಂದು ಎಲ್ಲೆಡೆ ದ್ವೇಷ
, ಅಸೂಯೆ ತುಂಬಿದೆ ಎಂದು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಆರ್.ಕೆ.ಸರ್ದಾರ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಇವರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

- Advertisement - 

ತ್ಯಾಗ ಬಲಿದಾನವೇ ನಿಜವಾದ ಹೋರಾಟ. ಬ್ರಿಟೀಷರ ದಬ್ಬಾಳಿಕೆ ವಿರೋಧಿಸಿ ಹೋರಾಟ ನಡೆಸಿದ ಮಹಾತ್ಮಗಾಂಧಿ ಒಬ್ಬೊರನ್ನೊಬ್ಬರು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕೆಂಬ ಸಂದೇಶ ನೀಡಿದ್ದಾರೆ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿರುವ ಹಿರಿಯರ ತತ್ವಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್‌ಶಾಸ್ತ್ರಿರವರು ಜೈಜವಾನ್, ಜೈಕಿಸಾನ್ ಎನ್ನುವ ಪರಿಕಲ್ಪನೆಯಿಟ್ಟುಕೊಂಡು ರೈತರ ಏಳಿಗೆಯ ಕನಸು ಕಂಡಿದ್ದರು. ಅಂತಹ ಮಹಾನ್ ನಾಯಕರುಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕೆಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೆ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ಇವರೆಡರ ತತ್ವ ಸಿದ್ದಾಂತದ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ಪಕ್ಷದ ಕಾರ್ಯಕರ್ತರು ಹಿರಿಯರ ಸಿದ್ದಾಂತ ಹಾಗೂ ಪಕ್ಷದ ಯೋಜನೆಗಳನ್ನು ಮನೆ ಮನೆ ಮುಟ್ಟಿಸಬೇಕು. ಗಾಂಧಿ, ಅಂಬೇಡ್ಕರ್, ನೆಹರು, ಲಾಲ್‌ಬಹದ್ದೂರ್‌ ಶಾಸ್ತ್ರಿ ಇವರುಗಳಿಗೆ ಬೇರೆ ಯಾರು ಸಾಟಿಯಿಲ್ಲ. ಅವರವರ ವ್ಯಕ್ತಿತ್ವ ದೊಡ್ಡದು. ಹಿರಿಯರ ತತ್ವ ಸಿದ್ದಾಂತಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕೆಂದರು.

- Advertisement - 

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಆರ್.ಎಸ್.ಎಸ್.ನವರು ಗಾಂಧಿ, ಅಂಬೇಡ್ಕರ್‌ರವರನ್ನು ಹಿಂದಿಕ್ಕಿ ಸಾವರ್ಕರ್‌ನನ್ನು ಬಿಂಬಿಸುತ್ತಿದ್ದಾರೆ. ಇದರಿಂದ ಒಂದಲ್ಲ ಒಂದು ದಿನ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಸ್ವದೇಶಿ ವಸ್ತುಗಳನ್ನೇ ಬಳಸಬೇಕೆಂಬ ಆಸೆಯಿಟ್ಟುಕೊಂಡಿದ್ದ ಗಾಂದಿ ದುರ್ಬಲರಿಗೆ ಎಲ್ಲ ಸವಲತ್ತುಗಳು ಸಿಗಬೇಕೆನ್ನುತ್ತಿದ್ದರು. ಲಾಲ್‌ಬಹದ್ದೂರ್‌ಶಾಸ್ತ್ರಿ ಜೈಜವಾನ್ ಜೈಕಿಸಾನ್ ಎನ್ನುವ ಘೋಷಣೆ ಮೊಳಗಿಸಿದರು. ಕಾಂಗ್ರೆಸ್‌ನ ಎಲ್ಲಾ ಯೋಜನೆಗಳನ್ನು ಬಿಜೆಪಿ. ಮೊಟಕುಗೊಳಿಸಿದೆ. ಇದರ ವಿರುದ್ದ ಕಾರ್ಯಕರ್ತರು ಎಚ್ಚೆತ್ತುಕೊಂಡು ಜನತೆಯಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಎಲ್ಲಾ ರಂಗಗಳನ್ನು ಖಾಸಗಿಕರಣಗೊಳಿಸಲು ಹೊರಟಿದೆ. ಮತ ಚೋರಿ ವಿರುದ್ದ ಯುವ ನಾಯಕ ರಾಹುಲ್‌ಗಾಂಧಿ ಹೋರಾಟ ನಡೆಸುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತಗಳುವು ಬಗ್ಗೆ ಮನವರಿಕೆ ಮಾಡಬೇಕು. ಮುಂದುವರೆದ ದೇಶಗಳಲ್ಲಿಯೇ ಮತ ಪತ್ರಗಳ ಮೂಲಕ ಚುನಾವಣೆ ನಡೆಯುತ್ತಿದ್ದರೆ ನಮ್ಮ ದೇಶದಲ್ಲಿ ಏಕೆ ಇ.ವಿ.ಎಂ. ಬೇಕು ಎಂದು ಪ್ರಶ್ನಿಸಿದರು?

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಗಾಂಧಿ ತತ್ವಗಳು ಕಣ್ಮೆರೆಯಾಗುತ್ತಿವೆ. ವಿಶ್ವಹಿಂದು ಪರಿಷತ್, ಆರ್.ಎಸ್.ಎಸ್.ನವರು ಗಾಂಧಿಯನ್ನು ಕೊಂದ ಗೋಡ್ಸೆ ಪರ ವಹಿಸಿಕೊಂಡು ಮಾತನಾಡುತ್ತಿರುವುದನ್ನು ನೋಡಿದರೆ ದೇಶ ಅಪಾಯದಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಗಾಂಧಿ ತತ್ವಗಳನ್ನು ಎಲ್ಲಡೆ ಸಾರಬೇಕಿದೆ ಎಂದರು.

ಕ್ವಿಟ್ ಇಂಡಿಯಾ ಚಳುವಳಿ ಮೂಲಕ ಗಾಂಧಿ ಬ್ರಿಟೀಷರ ವಿರುದ್ದ ಹೋರಾಡಬೇಕಾದರೆ ಸಾವರ್ಕರ್ ಆಂಗ್ಲನ್ನರ ಜೊತೆ ಸೇರಿಕೊಂಡು ದೇಶ ವಿಭಜನೆಗೆ ಕೈಜೋಡಿಸುತ್ತಾರೆ. ಅಂತಹ ವ್ಯಕ್ತಿಯನ್ನು ಬಿಜೆಪಿ.ಯವರು ದೇಶಭಕ್ತನಂತೆ ಬಿಂಬಿಸುತ್ತಿರುವುದು ಎಷ್ಟು ಸರಿ ಎನ್ನುವುದನ್ನು ಎಲ್ಲರೂ ಚಿಂತಿಸಬೇಕಿದೆ ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ ಮಾತನಾಡಿ ಮಹಾತ್ಮ ಗಾಂಧಿಜಿ ಗ್ರಾಮ ಸ್ವರಾಜ್ಯದ ಬಗ್ಗೆ ಕನಸು ಕಂಡಿದ್ದರು. ಲಾಲ್‌ಬಹುದ್ದೂರ್‌ಶಾಸ್ತ್ರಿ ಜೈಜವಾನ್ ಜೈಕಿಸಾನ್ ಎನ್ನುವ ಘೋಷಣೆ ಹೊರಡಿಸಿದರು. ಕೊನೆಯತನಕ ಗಾಂಧಿ ಖಾದಿ ತೊಟ್ಟು ಸ್ವದೇಶಿ ವಸ್ತುಗಳ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಮತ್ತೊಬ್ಬರನ್ನು ಅವಲಂಭಿಸದ ಗಾಂಧಿಯವರದು ಅಹಿಂಸೆ ಧ್ಯೇಯವಾಗಿತ್ತು. ಅಂತಹ ಮಹಾನ್ ನಾಯಕನ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಮಾತನಾಡಿ ಕೋಮುವಾದಿ ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವಿಜೃಂಭಿಸುತ್ತಿರುವುದನ್ನು ನೋಡಿದರೆ ದೇಶ ಎತ್ತ ಕಡೆ ಸಾಗುತ್ತಿದೆ ಎನ್ನುವ ಭಯ ಕಾಡುತ್ತಿದೆ. ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಭಾರತ ಸಂಪೂರ್ಣವಾಗಿ ಕೋಮುವಾದಿಗಳ ಹಿಡಿತಕ್ಕೆ ಸಿಲುಕುತ್ತದೆ. ಅದಕ್ಕಾಗಿ ರಾಷ್ಟ್ರಪಿತ ಮಹಾತ್ಮಗಾಂಧಿ, ಲಾಲ್‌ಬಹುದ್ದೂರ್‌ಶಾಸ್ತ್ರಿ, ಜವಾಹರಲಾಲ್ ನೆಹರು ಇನ್ನು ಅನೇಕ ನಾಯಕರುಗಳ ತ್ಯಾಗ ಬಲಿದಾನದ ಗುಣವನ್ನು ಪ್ರತಿ ಕಾರ್ಯಕರ್ತನು ಅಳವಡಿಸಿಕೊಳ್ಳಬೇಕಿದೆ ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್, ನಗರ ಮಂಡಲ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಮಂಡಲ ಅಧ್ಯಕ್ಷ ಆರ್.ಪ್ರಕಾಶ್, ಕಾನೂನು ವಿಭಾಗದ ಅಧ್ಯಕ್ಷ ಸುದರ್ಶನ್, ಸೈಯದ್ ವಲಿಖಾದ್ರಿ, ಜಿ.ವಿ.ಮಧುಗೌಡ,

ಎಲ್.ಕೆ.ರಾಬರ್ಟ್, ಸೈಯದ್ ಖುದ್ದೂಸ್, ನ್ಯಾಯವಾದಿ ಮಹಮದ್ ರಫಿ, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಎನ್.ಬಿ.ಟಿ.ಜಮೀರ್, ಎ.ಸಾಧಿಕ್‌ವುಲ್ಲಾ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪವಿತ್ರ, ಮುದಾಸಿರ್ ನವಾಜ್, ಮಹಿಳಾ ಸೇವಾದಳದ ಜಿಲ್ಲಾಧ್ಯಕ್ಷೆ ನೇತ್ರಾವತಿ, ಮಂಜುನಾಥಗುಪ್ತ, ಎ.ಜಾಕಿರ್‌ಹುಸೇನ್ ಇನ್ನು ಅನೇಕರು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";