ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗ. ಪ್ರಾಚೀನ ಕಾಲದಲ್ಲಿ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಸಾರ್ವಜನಿಕರು ಆತಂಕ ಪಡುತ್ತಿದ್ದರು, ಆಧುನಿಕ ಯುಗದಲ್ಲಿ ಕ್ಷಯ ರೋಗಕ್ಕೆ ನಿಗದಿತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಇರುವುದರಿಂದ ಕ್ಷಯಕ್ಕೆ ಭಯ ಬೇಡ, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಪವಿತ್ರ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಜಾನ್ ಮೈನ್ಸ್ ವತಿಯಿಂದ ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ಮೈನಿಂಗ್ ವಲಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದ 34 ಕ್ಷಯ ರೋಗಿಗಳಿಗೆ ಐದನೇ ಮಾಸಿಕ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಪೌಷ್ಠಿಕ ಆಹಾರದ ಕಿಟ್‍ಗಳಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ವಿಟಮಿನ್ಸ್ ಸೇರಿದ ಆಹಾರದ ಧಾನ್ಯಗಳು ಮತ್ತು ಡ್ರೈ ಫ್ರೂಟ್ಸ್‍ಗಳಿದ್ದು ಕ್ಷಯಾ ರೋಗಿಗಳು ಇವುಗಳ ಸದುಪಯೋಗಪಡಿಸಿಕೊಂಡು ಸರಿಯಾದ ಚಿಕಿತ್ಸೆ ಪಡೆದು, ಕುಟುಂಬದ ಇತರರಿಗೆ ಸೋಂಕು, ಹರಡದಂತೆ ಜಾಗ್ರತೆವಹಿಸಿ ರೋಗದಿಂದ ಗುಣಮುಖ ಹೊಂದುವುದರ ಜೊತೆಗೆ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಬೇಕೆಂದರು.
ಎನ್‍ಟಿಇಪಿ ಕಚೇರಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮಹೇಂದ್ರ ಮಾತನಾಡಿ, ತಮ್ಮಗಳ ಗ್ರಾಮಗಳಲ್ಲಿ ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಇಂತಹ ಲಕ್ಷಣಗಳಿದ್ದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಸಬೇಕು.
ಕ್ಷಯ ರೋಗ ದೃಢಪಟ್ಟಲ್ಲಿ ಸರ್ಕಾರ ಉಚಿತವಾಗಿ ಕ್ಷಯ ರೋಗಿಯ ಮನೆ ಬಾಗಿಲಿಗೆ ಔಷಧಿ ಒದಗಿಸುತ್ತದೆ. ಜೊತೆಗೆ ಪೌಷ್ಟಿಕ ಆಹಾರ ಸೇವನೆಗಾಗಿ ಡಿಬಿಟಿ ಮುಖಾಂತರ ಚಿಕಿತ್ಸಾ ಅವಧಿಯಲ್ಲಿ ಮಾಸಿಕ ರೂ.1000 ರೋಗಿಯ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಜಾನ್‍ಮೈನ್ಸ್‍ನ ಉಪ ವ್ಯವಸ್ಥಾಪಕ ಆರ್ ಪ್ರವೀಣ್ ಚಂದ್ರ ಮತ್ತು ಅಜಿತ್ ಕುಮಾರ್ ಮಾಳಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನವೀನ್ ಕುಮಾರ್, ಚಂದ್ರಶೇಖರ್, ಅಜಯ್, ರವಿಕುಮಾರ್, ಇಸ್ಮಾಯಿಲ್, ಸುನಿಲ್ ಕುಮಾರ್, ಆಶಾ ಕಾರ್ಯಕರ್ತೆಯರು ಮತ್ತಿತರರು ಹಾಜರಿದ್ದರು.