ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತ ಉತ್ಪನ್ನಗಳನ್ನು ಮಾರುಕಟ್ಟೆ ಸಾಗಿಸಲು, ಶೇಖರಿಸಿಡಲು ತುಮಕೂರು-ಚಿತ್ರದುರ್ಗ ಮಧ್ಯ ಕಾರ್ಗೋ ಎಕನಾಮಿಕ್ ಕಾರಿಡಾರ್ ಆರಂಭಿಸುವಂತೆ ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರೈಲ್ವೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಉತ್ತಮ ನೀರಾವರಿ ವ್ಯವಸ್ಥೆ ಇದ್ದು, ಗುಣಮಟ್ಟದ ಕೃಷಿ ಬೆಳೆ ಬೆಳೆಯಲಾಗುತ್ತಿದೆ. ಆದರೆ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ಮತ್ತು ಸಾಗಾಣಿಕೆ ವ್ಯವಸ್ಥೆ ಮಧ್ಯ ಕರ್ನಾಟಕದಲ್ಲಿ ಇಲ್ಲದ ಕಾರಣ, ಬೇರೆ ರಾಜ್ಯಗಳಿಗೆ ಹಾಗೂ ಜಾಗತಿಕ ಮಟ್ಟಕ್ಕೆ ಇಲ್ಲಿನ ಕೃಷಿ ಉತ್ಪನ್ನ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸಕಾಲಕ್ಕೆ ಸಾಗಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜಯಚಂದ್ರ ಅವರು ವಿವರಿಸಿದರು.
ರೈತರ ಆದಾಯ ಕೂಡ ವೃದ್ದಿಯಾಗುತ್ತಿಲ್ಲ. ಹೀಗಾಗಿ ಮಧ್ಯ ಕರ್ನಾಟಕಕ್ಕೆ ರೈಲ್ವೆ ಮಾರ್ಗದಲ್ಲಿ ಕೃಷಿ ಉತ್ಪನ್ನ ಸೇರಿದಂತೆ ವಿವಿಧ ಸಾಮಗ್ರಿಗಳ ಸಾಗಾಣಿಕೆಗೆ ವ್ಯವಸ್ಥೆ ಆಗುವುದು ಅತ್ಯಗತ್ಯವಾಗಿದೆ. ಈಗಾಗಲೆ ದಾವಣಗೆರೆ-ತುಮಕೂರು ನೇರ ರೈಲ್ವೆ ಮಾರ್ಗ ನಿರ್ಮಾಣವಾಗುತ್ತಿದ್ದು, ಈ ಮಾರ್ಗದಲ್ಲಿ ಬರುವ ಶಿರಾ-ಚಿತ್ರದುರ್ಗ ಮಧ್ಯ ಅಥವಾ ಈ ಮಾರ್ಗದಲ್ಲಿ ರೈಲ್ವೆ ಇಲಾಖೆ ನಿರ್ಧರಿಸುವ ಯಾವುದೇ ಸ್ಥಳದಲ್ಲಿ ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ರೈಲ್ವೆ ಮನವಿ ಮಾಡಿದಲ್ಲದೆ ಈ ಕುರಿತ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಟಿ.ರಘುಮೂರ್ತಿ, ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರೈಲ್ವೆ ಇಲಾಖೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಜಯ್ ಶರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಜಿಎಂ) ಮುದಿತ್ ಮಿತ್ತಲ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ನೇರ ರೈಲ್ವೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್, ಸೇರಿದಂತ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.