ರೈತರ ಜಮೀನುಗಳಿಗೆ ಏಪ್ರಿಲ್-10ರ ತನಕ ತುಂಗಭದ್ರಾ ನೀರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬೇಸಿಗೆಯಲ್ಲಿ ರಾಯಚೂರು
, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಏಪ್ರಿಲ್​ 10ರ ತನಕ ಕಾಲುವೆಗೆ ಮೂರು ಸಾವಿರ ಕ್ಯೂಸೆಕ್​​​ನಂತೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

 ವಿಧಾನಸೌಧದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ರೈತರ ಪರವಾಗಿದೆ. ಕುಡಿಯುವ ನೀರಿಗೂ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾರ್ಚ್​​​ 21ರಂದು ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ಏಪ್ರಿಲ್ 9 ಅಥವಾ 10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3,000 ಕ್ಯೂಸೆಕ್​​ನಂತೆ ನೀರು ಹರಿಸಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಫಸಲಿಗಾಗಿ ಕಾಯುತ್ತಿರುವ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸಲಾಗುವುದು. ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಕೊನೆ ಭಾಗದ ರೈತರಿಗೆ ನೀರು ನೀಡಲು ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ನೀರು ಹರಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.‌

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರ ಸಂಬಂಧಿತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

Share This Article
error: Content is protected !!
";