ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಪ್ರತಿಭೆಗೆ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಸಾಕ್ಷಿ ಈ ಇಬ್ಬರು ಬಾಲಕರು. ಕರಾಟೆ, ಜಿಮ್ನಾಸ್ಟಿಕ್ಸ್ ಸೇರಿದಂತೆ ದೇಶದ ಎಲ್ಲಾ ಧ್ವಜಗಳ ಹೆಸರನ್ನು ಗುರುತಿಸುವ ಅಪೂರ್ವ ಪ್ರತಿಭೆ, ಜೊತೆಗೆ ಭಗವದ್ಗೀತೆಯ ಪಠಣ ಇವರ ಬುದ್ಧಿವಂತಿಕೆ ನೋಡಿ ಸಂತಸವಾಯಿತು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆಯ ಅನುಭವ ಮಂಟಪ ಶಾಲೆಯ 2ನೇ ತರಗತಿಯ ಅರಸು ಪ್ರದೀಪ್ ಹಾಗೂ ಎಲ್ಕೆಜಿಯ ಹೊಯ್ಸಳ ಪ್ರದೀಪ್ ಇಬ್ಬರೂ ಅನನ್ಯ ಸಾಧನೆಯ ಪ್ರತಿಭಾವಂತ ಬಾಲಕರು.
ವಿಶೇಷತೆ ಎಂದರೆ ಇವರ ಮನೆಯಲ್ಲಿ ಟಿವಿಯಿಲ್ಲ, ಮೊಬೈಲ್ ಬಳಕೆ ಇಲ್ಲ. ಬಾಲಕರ ತಾಯಿ ಮಮತಾ ಅವರು ಮಕ್ಕಳಲ್ಲಿ ಜ್ಞಾನಾಭಿವೃದ್ಧಿಗಾಗಿ ಪ್ರತಿನಿತ್ಯ ಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿದ್ದಾರೆ.
ಅರಸು ಪ್ರದೀಪ್ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾರೆ. ಹೊಯ್ಸಳ ಆ ಪ್ರಯತ್ನದಲ್ಲಿದ್ದಾರೆ. ಈ ಇಬ್ಬರು ಬಾಲಕರ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಡಾ.ಪ್ರಭಾ ಅವರು ಹಾರೈಸಿದ್ದಾರೆ.

