ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೋಷಕರೊಂದಿಗೆ ಹಾಲು ತರಲು ಹೊರಟಿದ್ದ ಇಬ್ಬರು ಮಕ್ಕಳು ಶಾಲಾ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ.
ವರ್ಷಾ(2) ಹಾಗೂ ಭಾನು(4) ಮೃತ ಮಕ್ಕಳು. ಖಾಸಗಿ ಶಾಲೆಗೆ ಸೇರಿದ ಬಸ್ ಬೈಕ್ಗೆ ಡಿಕ್ಕಿ ಹೊಡೆದು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್ನಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ. ತಮ್ಮ ಮಗಳು ವರ್ಷ ಮತ್ತು ಅಣ್ಣನ ಮಗಳಾದ ಭಾನು ಇಬ್ಬರನ್ನು ಬೈಕ್ನಲ್ಲಿ ಕೂರಿಸಿಕೊಂಡು ಹಾಲು ತರಲು ಹೋಗುತ್ತಿದ್ದರು.
ಇದೇ ವೇಳೆ ಸ್ಕೂಲ್ ಬಸ್ ಮಕ್ಕಳ ಪಿಕಪ್ಗೆ ತೆರಳುತ್ತಿತ್ತು. ಬಸ್ ಬರುವುದನ್ನು ಕಂಡು ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರು. ಹೆಣ್ಣೂರು ಸಂಚಾರಿ ಠಾಣೆ ವ್ಯಾಪ್ತಿಯ ಥಣಿಸಂದ್ರ ಬಳಿ ಶಾಲಾ ಬಸ್ ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್ಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದೆ. ಕೂಡಲೇ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕಾನ್ಸ್ಟೇಬಲ್ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ಚಾಲಕ ವಶಕ್ಕೆ:
ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

