ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಆನ್ಲೈನ್ ನಲ್ಲಿ ಅಮಾಯಕ ಗ್ರಾಹಕರನ್ನ ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಕೋಟ್ಯಂತರ ರೂ. ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇಂಜಿನಿಯರ್ ಆಗಿದ್ದ ಮಂಜುನಾಥ್ 31 ವರ್ಷಗಳ ಕಾಲ ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದರು. ಬ್ಯಾಂಕ್‌ನ ಪ್ರತಿನಿಧಿಗಳ ಸೋಗಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಮಂಜುನಾಥ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ಕ್ರೆಡಿಟ್ ಕಾರ್ಡ್ ಲಿಮಿಟ್ಸ್ ಓವರ್ ಡ್ಯೂ ಆಗಿದೆ ಎಂದು ವಿವರಗಳನ್ನು ಪಡೆದುಕೊಂಡಿದ್ದರು. ಬಳಿಕ ನಿಮ್ಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ಆದ್ದರಿಂದ ಇಡಿ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದರು.
ನಂತರ ನಕಲಿ ವಾರೆಂಟ್ ಫೋಟೋ ಕಳಿಸಿ ನಿಮ್ಮನ್ನ ಬಂಧಿಸುತ್ತಿದ್ದು ತಿಹಾರ್ ಜೈಲಿನಲ್ಲಿರಿಸಲಿದ್ದೇವೆ ಎಂದು ಆರೋಪಿಗಳು ಬೆದರಿಸಿದ್ದರು.
ಹೀಗೆ ಮೂರು ತಿಂಗಳ ಕಾಲ ಬೆದರಿಸುತ್ತ ವಿವಿಧ ಹಂತಗಳಲ್ಲಿ 4.79 ಕೋಟಿ ರೂಪಾಯಿ ಸುಲಿಗೆಗೈದಿದ್ದ ಆರೋಪಿಗಳು, ಆಸ್ತಿ ಪತ್ರಗಳ ಕಾಪಿಗಳನ್ನು ಸಹ ಪಡೆದುಕೊಂಡಿದ್ದರು.
ವಂಚಕರ ಕಿರುಕುಳ ಅತಿಯಾದಾಗ ಅದನ್ನು ತಾಳಲಾರದ ದಂಪತಿ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವೃದ್ಧ ದಂಪತಿಯ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದ ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
ವಂಚಿಸಿದ ಹಣದಲ್ಲಿ ಆರೋಪಿಗಳು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ಬಳಸಿರುವುದು ಸಹ ಗೊತ್ತಾಗಿದೆ. ಸದ್ಯ ಆರೋಪಿತರ ವಿಚಾರಣೆ ನಡೆಸಲಾಗುತ್ತಿದ್ದು, ವಂಚಿಸಿದ ಹಣವನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಮಾಹಿತಿ ನೀಡಿದ್ದಾರೆ.