ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ ಹೊಸೂರು ಬಳಿ ಬುಧವಾರ ಮುಂಜಾನೆ ನಡೆದಿದೆ.
ಕಾರು ಕೆರೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ಗ್ರಾಮ ನಿವಾಸಿ ನವೀನ್(21) ಹಾಗೂ ರಾಮಚಂದ್ರ(37) ಮೃತ ದುರ್ದೈವಿಗಳು. ರುದ್ರೇಶ್(26) ಹಾಗೂ ಮಂಜುನಾಥ್(21) ಇಬ್ಬರು ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪರಾಗಿದ್ದಾರೆ. ರಾಮಚಂದ್ರ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ಶಿಕಾರಿಪುರದ ಪುನೇದಹಳ್ಳಿಯಿಂದ ಬುಧವಾರ ಬೆಳಗಿನಜಾವ ಆನವಟ್ಟಿ ಕಡೆ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

