ಕಟ್ಟಡದ ಪಾಯ ಕುಸಿದು ಇಬ್ಬರು ಕಾರ್ಮಿರ ದಾರುಣ ಸಾವು

News Desk

ಚಂದ್ರವಳ್ಳಿ ನ್ಯೂಸ್, ಯಲಹಂಕ (ಬೆಂಗಳೂರು):
ಕಟ್ಟಡದ ಪಾಯಕ್ಕೆ ಮಳೆ ನೀರು ನುಗ್ಗಿ ಪಾಯದಲ್ಲಿನ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಕಳೆದ ಸೋಮವಾರ ರಾತ್ರಿ ಯಲಹಂಕದಲ್ಲಿ ಸಂಭವಿಸಿದೆ.

ಆಂಧ್ರ ಪ್ರದೇಶ ಮೂಲದ ಜೆ.ಶಿವಾ (32) ಮತ್ತು ಮಧುಸೂದನ್ ರೆಡ್ಡಿ (58) ಮೃತ ಕಾರ್ಮಿಕರು. ಇಲ್ಲಿನ ಎಂಬೆಸ್ಸಿ ಗ್ರೂಪ್ ಸಂಸ್ಥೆಯ ಕಟ್ಟಡದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ.

- Advertisement - 

ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ದೊಡ್ಡದಾದ ಗುಂಡಿ ತೆಗೆದಿದ್ದರು. ಈ ಗುಂಡಿಗೆ ಇಳಿದು ಕೆಲಸ ಮಾಡುತ್ತಿದ್ದಾಗ ರಾತ್ರಿ ಅನಿರೀಕ್ಷಿತವಾಗಿ ಮಳೆ ಸುರಿದಿದೆ. ಪರಿಣಾಮ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಕಾರ್ಮಿಕರು ತಕ್ಷಣವೇ ಹೊರಬರಲು ಯತ್ನಿಸಿದ್ದರು.

ಈ ವೇಳೆ, ಇಬ್ಬರ ಮೇಲೆ ಗುಂಡಿಯಲ್ಲಿನ ಮಣ್ಣು ಕುಸಿದಿದೆ. ಪರಿಣಾಮ ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಆತನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆತನು ಸಹ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

- Advertisement - 

ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತಿಳಿಸಿದ್ದಾರೆ. ವ್ಯಾಪಕ ಮಳೆ:

ವಾಯುಭಾರ ಕುಸಿತದಿಂದ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅಲ್ಲದೆ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳ ಕೊಲ್ಲಿಯ ಉತ್ತರ ಭಾಗದ ಒಡಿಶಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿದ್ದು ಇದರಿಂದ ಸೆ.7ರ ವರೆಗೆ ಕೊಪ್ಪಳ, ಬೀದರ್‌ಹಾಗೂ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

 

Share This Article
error: Content is protected !!
";