ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಂಧುಗಳೇ, ನಾವೆಲ್ಲರೂ ಹೊಸ ವರ್ಷದ ಹೊಸ್ತಿಲಲ್ಲಿದ್ದೇವೆ. ಯುಗಾದಿ ಎಂದರೆ ಪ್ರಕೃತಿ ಮತ್ತು ಮನುಷ್ಯನಷ್ಟೇ ಅಲ್ಲ, ಇಡೀ ಜೀವ ಸಂಕುಲದ ಸಂಭ್ರಮ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿ ಸರ್ವರಿಗೂ ಯುಗಾದಿ ಶುಭಾಶಯಗಳನ್ನು ಕೋರಿದ್ದಾರೆ.
ಯುಗಾದಿ ಹಬ್ಬವು ಜೀವ ಜೀವದ ನಂಟನ್ನು ಮತ್ತಷ್ಟು ಗಾಢವಾಗಿ ಬೆಸೆಯುವ, ನಂಬಿಕೆ ವಿಶ್ವಾಸವನ್ನು ವೃದ್ಧಿಸಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಅನನ್ಯ ಆಚರಣೆ ಎಂದು ಅವರು ತಿಳಿಸಿದ್ದಾರೆ.
ವರಕವಿ ಶ್ರೀ ದ.ರಾ. ಬೇಂದ್ರೆ ಅವರು ಬರೆಯುವಂತೆ.. ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ||
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|| ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ|| ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ|| ವರಕವಿಗಳ ಆಶಯವು ಎಲ್ಲರ ಆಶಯವೂ ಆಗಲಿ ಎಂಬುದು ನನ್ನ ಭಾವನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಶ್ರೀ ವಿಶ್ವಾವಸು ನಾಮ ಸಂವತ್ಸರವು ಪ್ರತಿಯೊಬ್ಬರಿಗೂ ಶುಭವುಂಟು ಮಾಡಲಿ. ರೈತಾಪಿ ಬಂಧುಗಳು, ಜೆಡಿಎಸ್ ಪಕ್ಷದ ಸಮಸ್ತ ಕಾರ್ಯಕರ್ತರೂ ಸೇರಿದಂತೆ ಸರ್ವರಿಗೂ ಸುಖ ಸಂತೋಷ, ನೆಮ್ಮದಿ ಸಮೃದ್ಧಿ ಕರುಣಿಸಿ ಕಾಪಾಡಲಿ ಎಂದು ಅವರು ಆಶಿಸಿದ್ದಾರೆ.
ಯುಗಾದಿಯ ಬೇವು ಬೆಲ್ಲದಂತೆ ಯಶಸ್ಸು ಮತ್ತು ಸವಾಲುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಹೊಸ ವರುಷದಲ್ಲಿ ಪಕ್ಷವನ್ನು ಹೊಸ ಹುರುಪಿನಿಂದ ನಾವೆಲ್ಲರೂ ಸಂಘಟಿತವಾಗಿ ಕಟ್ಟೋಣ ಎಂದು ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಲು ಬಯಸುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.