ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುದ್ಧಗಳ ನೆಪವೊಡ್ಡಿ ಕೇಂದ್ರ ಸರ್ಕಾರವು ದೇಶದ ಬೆಲೆ ಏರಿಕೆ ಸಮಸ್ಯೆಯನ್ನು ಕಡೆಗಣಿಸುತ್ತಿದೆ. ಕೇಂದ್ರದ ತಪ್ಪು ವಿದೇಶಾಂಗ ನೀತಿಗಳಿಂದಾಗಿ ಬಡವರ ಬದುಕು ದುಸ್ತರವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಕಟುವಾಗಿ ಟೀಕಿಸಿದರು.
ಸೌದೆ ಭಾಗ್ಯ: “ಕೇಂದ್ರದ ‘ಉಜ್ವಲ‘ ಯೋಜನೆ ವಿಫಲವಾಗಿದ್ದು, ದೇಶದಲ್ಲಿ ಮತ್ತೆ ‘ಸೌದೆ‘ ಯುಗ ಆರಂಭವಾಗಿದೆ. ಅಡುಗೆ ಅನಿಲದ ಸಮರ್ಪಕ ಪೂರೈಕೆ ಇಲ್ಲದೆ ಸಾಮಾನ್ಯ ಜನರು ಮತ್ತು ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಮೋದಿಯವರು ನಮಗೆ ಇಂದು ‘ಸೌದೆ ಭಾಗ್ಯ‘ ನೀಡಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ಬಿಸಿ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಇಂದಿನಿಂದ ಟೋಲ್ ದರ ಏರಿಕೆ ಮಾಡಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಔಷಧಿಗಳ ಬೆಲೆ ಹೆಚ್ಚಳ: ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಬದುಕನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಷ್ಟಕ್ಕೆ ದೂಡಿದೆ ಎಂದು ದೂರಿದರು.
ಜನರನ್ನೇ ‘ಏಪ್ರಿಲ್ ಫೂಲ್‘ ಮಾಡಿದ ಕೇಂದ್ರ: ಏಪ್ರಿಲ್ ಒಂದರಿಂದಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ‘ಏಪ್ರಿಲ್ ಫೂಲ್‘ ಮಾಡಿದೆ. ಜನರ ಆರ್ಥಿಕ ಸವಾಲುಗಳನ್ನು ನೀಗಿಸುವ ಬದಲು ಅವರಿಗೆ ಹೆಚ್ಚಿನ ಹೊರೆ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
’ಅಚ್ಛೇ ದಿನ್‘ ಎಲ್ಲಿವೆ?
”ಅಚ್ಛೇ ದಿನಗಳು ಬರುತ್ತವೆ ಎಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರೇ, ಈಗ ಆ ದಿನಗಳು ಎಲ್ಲಿವೆ? ಈಗ ‘ಅಚ್ಛೇ ದಿನಗಳು‘ ಹೋಗಿ ‘ಕಚ್ಚಾ ದಿನಗಳು‘ ಬಂದಿವೆ ಎಂದು ಹೇಳಬೇಕಿದೆ,” ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

