ಚಂದ್ರವಳ್ಳಿ ನ್ಯೂಸ್, ತುಮಕೂರು:
ವಿಶ್ವದ ಅತಿ ದೊಡ್ಡ ಚುನಾವಣೆಗೆ ಹೆಸರಾಗಿರುವ ಭಾರತದ ೨೦೨೪ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಸಮಗ್ರ ದತ್ತಾಂಶವನ್ನು ಬಿಡುಗಡೆ ಮಾಡಿದೆ.
ಈ ದತ್ತಾಂಶವು ಏಕಕಾಲದಲ್ಲಿ ನಡೆದ ೨೦೨೪ರ ಲೋಕಸಭಾ ಚುನಾವಣೆ(೫೪೩ ಕ್ಷೇತ್ರ) ಹಾಗೂ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ಸೇರಿದಂತೆ ೪ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಸಂಕ್ಷಿಪ್ತ ಅಂಕಿ-ಅಂಶಗಳನ್ನು ಈ ದತ್ತಾಂಶ ಒಳಗೊಂಡಿದೆ.
ಚುನಾವಣಾ ವಿಶ್ಲೇಷಣೆ ಮಾಡಲು ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಹಾಗೂ ಮತದಾರರಿಗೆ ಈ ದತ್ತಾಂಶ ಅನುಕೂಲವಾಗಲಿದೆ.
ಚುನಾವಣಾ ಆಯೋಗದ ಈ ಸ್ವಯಂಪ್ರೇರಿತ ದತ್ತಾಂಶ ಬಿಡುಗಡೆ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನೊಳಗೊಂಡಿದೆ. ಈ ಸವಿವರವಾದ ದತ್ತಾಂಶ ಬಿಡುಗಡೆಯು ಶೈಕ್ಷಣಿಕ ಸಂಶೋಧನೆ ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆ ಸಂಬಂಧಿಸಿದ ದತ್ತಾಂಶವನ್ನು ಬಹಿರಂಗಪಡಿಸುವ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದಾಗಿದೆ.
ಮತದಾರರ ವಿವರ:
೨೦೨೪ರ ಲೋಕಸಭಾ ಚುನಾವಣೆಯಲ್ಲಿ ೯೭,೯೭,೫೧,೮೪೭ ನೋಂದಾಯಿತ ಮತದಾರರಿದ್ದು, ವಿದ್ಯುನ್ಮಾನ ಮತ್ತು ಅಂಚೆ ಮತ ಸೇರಿದಂತೆ ಒಟ್ಟು ೬೪.೬೪ ಕೋಟಿ ಮತಗಳು ಚಲಾವಣೆಗೊಂಡಿವೆ. ಇದರಲ್ಲಿ ೩೨,೯೩,೬೧,೯೪೮ ಪುರುಷರು; ೩೧,೨೭,೬೪,೨೬೯ ಮಹಿಳೆಯರು ಹಾಗೂ ೧೩,೦೫೮ ತೃತೀಯ ಲಿಂಗಿಗಳು ಒಳಗೊಂಡಿದ್ದು, ೪೨,೮೧,೫೯೪ ಅಂಚೆ ಮತಪತ್ರ ಸೇರಿದಂತೆ ಒಟ್ಟು ೬೪,೬೪,೨೦,೮೬೯ (೬೩,೭೧,೮೩೯-ನೋಟಾ) ಮತಗಳು ಚಲಾವಣೆಗೊಂಡಿವೆ.
ಈ ಚುನಾವಣೆಯಲ್ಲಿ ಅಸ್ಸಾಂ ರಾಜ್ಯದ ಧುಬ್ರಿ ಲೋಕಸಭಾ ಕ್ಷೇತ್ರದಲ್ಲಿ ಶೇ.೯೨.೩ರಷ್ಟು ಮತದಾನವಾಗುವ ಮೂಲಕ ಅತಿ ಹೆಚ್ಚು ಮತದಾನವಾಗಿರುವ ಲೋಕಸಭಾ ಕ್ಷೇತ್ರವೆನಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅತಿ ಕಡಿಮೆ ಶೇ.೩೮.೭ರಷ್ಟು ಹಾಗೂ ೧೧ ಲೋಕಸಭಾ ಕ್ಷೇತ್ರಗಳಲ್ಲಿ ಶೇ.೫೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ೯೧,೧೯,೫೦,೭೩೪ ಮತದಾರರು ನೋಂದಾಯಿಸಿಕೊಂಡಿದ್ದು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ೯೭,೯೭,೫೧,೮೪೭ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಶೇ.೭.೪೩ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾದಂತಾಗಿದೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿಯೂ ೨೦೧೯ರಲ್ಲಿ ಕೇವಲ ಶೇ.೧೪.೪ರಷ್ಟಿದ್ದ ಮತದಾನ ಪ್ರಮಾಣ ಶೇ.೩೮.೭ಕ್ಕೆ ಏರಿಕೆಯಾಗಿದೆ.
ಮತಗಟ್ಟೆ ವಿವರ :
೨೦೨೪ರ ಲೋಕಸಭಾ ಚುನಾವಣೆಯಲ್ಲಿ ೧೦,೫೨,೬೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ ೪೦ ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನವಾಗಿದೆ. ಮತದಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ೧,೬೨,೦೬೯ ಹಾಗೂ ಲಕ್ಷದ್ವೀಪದಲ್ಲಿ ಅತಿ ಕಡಿಮೆ ಅಂದರೆ ೫೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ೧೧ ಸಂಸದೀಯ ಕ್ಷೇತ್ರಗಳು ೧,೦೦೦ಕ್ಕಿಂತ ಕಡಿಮೆ ಹಾಗೂ ೩ ಸಂಸದೀಯ ಕ್ಷೇತ್ರಗಳು ೩,೦೦೦ಕ್ಕಿಂತ ಹೆಚ್ಚಿನ ಮತಗಟ್ಟೆಗಳನ್ನು ಹೊಂದಿದ್ದವು. ೨೦೨೪ರಲ್ಲಿ ಬಿಹಾರ್ ರಾಜ್ಯದಲ್ಲಿ ಅತಿಹೆಚ್ಚು ೪೭೩೯ ಹೊಸ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು.
ನಾಮನಿರ್ದೇಶನ ವಿವರ :
೨೦೨೪ರ ಚುನಾವಣೆಯಲ್ಲಿ ಒಟ್ಟು ೧೨,೪೫೯ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ರಾಜ್ಯದ ಮಲ್ಕಾಜ್‌ಗಿರಿ ೧೧೪-ಲೋಕಸಭಾ ಕ್ಷೇತ್ರವು ಹೊಂದಿದೆ.
ಮಹಿಳಾ ಮತದಾರರ ವಿವರ :
೨೦೨೪ರ ಚುನಾವಣೆಯಲ್ಲಿ ಒಟ್ಟು ನೋಂದಾಯಿತ ೯೭,೯೭,೫೧,೮೪೭ ಮತದಾರರ ಪೈಕಿ ೪೭,೬೩,೧೧,೨೪೦ ಮಹಿಳಾ ಮತದಾರರು ನೋಂದಾಯಿಸಿಕೊಂಡಿದ್ದರು. ೨೦೧೯ರ ಚುನಾವಣೆಯನ್ನು ಹೋಲಿಸಿದಾಗ ಈ ಚುನಾವಣೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆ ಶೇಕಡ ೦.೫೩ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ಮಹಿಳಾ ಮತದಾರರನ್ನು ಪುದುಚೇರಿ(೫೩.೦೩%) ಹಾಗೂ ಕೇರಳ(೫೧.೫೬%) ರಾಜ್ಯ ಹೊಂದಿದೆ. ಅಂದರೆ ಪ್ರತಿ ೧,೦೦೦ ಪುರುಷ ಮತದಾರರಿಗೆ ೯೪೬ ಮಹಿಳಾ ಮತದಾರರಿದ್ದರು.
ಮತದಾನ ಪ್ರಮಾಣ :
೨೦೨೪ರಲ್ಲಿ ಶೇಕಡ ೬೫.೫೫ರಷ್ಟು ಪುರುಷ ಹಾಗೂ ಶೇ.೬೫.೭೮ರಷ್ಟು ಮಹಿಳಾ ಮತದಾರರು ಮತ ಚಲಾಯಿಸಿದ್ದು, ೨೦೧೯ರಂತೆಯೇ ೨೦೨೪ರಲ್ಲಿಯೂ ಮತದಾನ ಪ್ರಮಾಣದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ೨ನೇ ಬಾರಿ ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಳವಾಗಿದೆ.
ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಮಹಾರಾಷ್ಟ್ರ(ಮಹಿಳಾ ಅಭ್ಯರ್ಥಿಗಳ ಸಂಖ್ಯೆ-೧೧೧), ಉತ್ತರಪ್ರದೇಶ(೮೦) ಹಾಗೂ ತಮಿಳುನಾಡು(೭೭) ರಾಜ್ಯಗಳು ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ. ಚುನಾವಣೆ ನಡೆದ ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ೧೫೨ ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದಿಲ್ಲ.
ತೃತೀಯ ಲಿಂಗ ಮತದಾರರ ವಿವರ :
೨೦೧೯ರ ಲೋಕಸಭಾ ಚುನಾವಣೆಯಲ್ಲಿ ೩೯,೦೭೫ ಹಾಗೂ ೨೦೨೪ರಲ್ಲಿ ೪೮,೨೭೨ ತೃತೀಯ ಲಿಂಗ ಮತದಾರರು ನೋಂದಾಯಿಸಿಕೊಂಡಿದ್ದು, ೫ ವರ್ಷಗಳ ಅವಧಿಯಲ್ಲಿ ಶೇ.೨೩.೫ರಷ್ಟು ತೃತೀಯ ಲಿಂಗ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ.
ತಮಿಳುನಾಡು ರಾಜ್ಯವು ಅತಿ ಹೆಚ್ಚು ೮,೪೬೭ ತೃತೀಯ ಲಿಂಗ ಮತದಾರರನ್ನು ಹೊಂದಿದ್ದು, ೨೦೧೯ರಲ್ಲಿ ಶೇ.೧೪.೬೪ ಹಾಗೂ ೨೦೨೪ರಲ್ಲಿ ಶೇ.೨೭.೦೯ರಷ್ಟು ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದು, ಬಹುತೇಕ ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ ಪ್ರಮಾಣ ದ್ವಿಗುಣವಾಗಿರುವುದು ಕಾಣಬಹುದಾಗಿದೆ.
ಈ ಚುನಾವಣೆಯಲ್ಲಿ ೯೦,೨೮,೬೯೬ ದಿವ್ಯಾಂಗ ಮತದಾರರು ಹಾಗೂ ೧,೧೯,೩೭೪ ಸಾಗರೋತ್ತರ ಮತದಾರರು ನೋಂದಾಯಿಸಿಕೊಂಡಿದ್ದರು.
ಚುನಾವಣಾ ಫಲಿತಾಂಶ ವಿವರ :
೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದ ಒಟ್ಟು ೬ ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೭೧೯೦ ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೨೭೯ ಸ್ವತಂತ್ರ ಮಹಿಳಾ ಅಭ್ಯರ್ಥಿ ಸೇರಿ ೩೯೨೧ ಸ್ವತಂತ್ರ ಅಭ್ಯರ್ಥಿಗಳ ಪೈಕಿ ೭ ಮಂದಿ ಮಾತ್ರ ಆಯ್ಕೆಯಾಗಿದ್ದು, ೩೯೦೫ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ.
೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಹಾಗೂ ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ Link: Menu >>MEDIA & PUBLICATION>>Election Results & Statistics< https://www.gov.in.statistical-reports ನಿಂದ ಪಡೆಯಬಹುದಾಗಿದೆ.
ಲೇಖನ-ಆರ್. ರೂಪಕಲಾ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ತುಮಕೂರು.

