ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ; ಕೇಂದ್ರ ಕೊಟ್ಟ ಹಣವನ್ನೂ ಬಳಸಲಾಗದ ದೌರ್ಭಾಗ್ಯದ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
“ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎನ್ನುವಂತಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸ್ಥಿತಿ.
ಒಂದೆಡೆ ರಾಜ್ಯದ ಖಜಾನೆ ಖಾಲಿ ಮಾಡಿ, ಅಭಿವೃದ್ಧಿ ಕೆಲಸಗಳಿಗೆ ನಯಾಪೈಸೆ ಅನುದಾನ ನೀಡಲು ಯೋಗ್ಯತೆ ಇಲ್ಲದೆ ದಿವಾಳಿಯಾಗಿರುವ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ಕೇಂದ್ರ ಸರ್ಕಾರ ಕಳುಹಿಸಿದ ಅನುದಾನವನ್ನೂ ಸಕಾಲಕ್ಕೆ ಬಳಸಲಾಗದೆ ಮರಳಿ ಕಳುಹಿಸುತ್ತಿದೆ.
ಸಿಟೀಸ್ 2.0 (CITIIS 2.0) ಯೋಜನೆಯಡಿ ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಮೊದಲ ಕಂತಿನ ಹಣವನ್ನು ಬಳಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ಈಗ ಆ ಹಣವನ್ನು ಕೇಂದ್ರಕ್ಕೆ ವಾಪಸ್ ನೀಡಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ರಾಜ್ಯದ ಜನತೆಗೆ ಮಾಡುತ್ತಿರುವ ಮಹಾ ದ್ರೋಹ ಎಂದು ಅಶೋಕ್ ಟೀಕಿಸಿದ್ದಾರೆ.
ಬರೀ ‘ಡಿನ್ನರ್ ಮೀಟಿಂಗ್‘ಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ಕಾಲ ಕಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಅನುದಾನ ಬಳಸಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಿಮ್ಮ ಈ ನಿಷ್ಕ್ರಿಯತೆಯಿಂದಾಗಿ ರಾಜ್ಯದ ಅಭಿವೃದ್ಧಿ ಹಳಿ ತಪ್ಪುತ್ತಿದೆ.
ಈ ಭ್ರಷ್ಟ ಮತ್ತು ಅದಕ್ಷ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವವೇ ಇಲ್ಲ. ಇದು ಮಾತ್ರ ಗ್ಯಾರಂಟಿ ಎಂದು ಅಶೋಕ್ ತಿಳಿಸಿದ್ದಾರೆ.

