ಚಂದ್ರವಳ್ಳಿ ನ್ಯೂಸ್, ಮೈಸೂರು:
ಇರಾನ್- ಇಸ್ರೇಲ್ ಪರಸ್ಪರ ದಾಳಿಯಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಕಾಮೋರ್ಡ ಆವರಿಸಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅಲ್ಲೇ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಏಕಾಏಕಿ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಕುವೈತ್, ದುಬೈ, ಅಬುದಾಬಿ ಸೇರಿದಂತೆ ಇತರೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕನ್ನಡಿಗರು ಸಿಲುಕಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಕುಮಾರಸ್ವಾಮಿ, ಯುದ್ಧ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನೂ ಕರೆಸುವುದು ಕಷ್ಟ ಎಂದು ತಿಳಿಸಿದ್ದಾರೆ.
ವಿಮಾನ ಹಾರಾಟ ಆರಂಭವಾದರೆ ಸುರಕ್ಷಿತವಾಗಿ ಬರುತ್ತಾರೆ. ವಿಮಾನ ಹಾರಾಟ ಬಂದ್ ಆಗಿರುವ ಕಾರಣ ಸಮಸ್ಯೆಯಾಗಿದೆ. ದುಬೈನಲ್ಲಿ ಕೆಲಸ ಮಾಡ್ತಿರುವ ಕನ್ನಡಿಗರು ಸಹಾಯಕ್ಕೆ ಬಂದಿದ್ದಾರೆ. ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರ ಕೂಡ ಭಾರತೀಯರ ಸುರಕ್ಷತೆಗೆ ಒತ್ತು ಕೊಟ್ಟಿದೆ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದರು.

