ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶೀಯ ಮತ್ತು ಕೈಗಾರಿಕೀಕರಣದ ಬೆನ್ನೆಲುಬಾಗಿರುವ ಹಾಗೂ ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ ಶೇ.50ರಷ್ಟು ಉತ್ಪಾದಿಸುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲು ಕುರಿತು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸಣ್ಣ ಗಾತ್ರದ ಉಕ್ಕು ಉದ್ಯಮವು 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉತ್ಪಾದಿಸುವ ಕಾರ್ಯಸೂಚಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂಬುದು ನನ್ನ ಅಚಲ ವಿಶ್ವಾಸ ಎಂದು ಕುಮಾರಸ್ವಾಮಿ ಹೇಳಿದರು.
ಪರಿಸರ ಪೂರಕ ಉಕ್ಕು ಪ್ರಮಾಣೀಕರಣ ಮತ್ತು ಹೈಡ್ರೋಜನ್ ಆಧರಿತ ಉಕ್ಕು ತಯಾರಿಕೆಯಿಂದ ಮುಂದುವರಿದ ಸ್ಕ್ರ್ಯಾಪ್ ಮರುಬಳಕೆ, ಇಂಧನ ಸಾಮರ್ಥ್ಯ, ತಂತ್ರಜ್ಞಾನದವರೆಗೆ ನಮ್ಮ ನೀತಿಗಳು ನಾವೀನ್ಯತೆ, ಸುಸ್ಥಿರತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಕ್ರಿಯಗೊಳಿಸುತ್ತಿವೆ ಎಂದು ಕೇಂದ್ರ ಸಚಿವರು ತಿಳಿಸಿದರು.
ನಾವೆಲ್ಲರೂ ಒಟ್ಟಾಗಿ #ViksitBharat ಸಾಕಾರಕ್ಕಾಗಿ ಶೂನ್ಯ ಇಂಗಾಲ ಹೊರಸೂವಿಕೆಯತ್ತ ದೃಢಹೆಜ್ಜೆ ಇರಿಸಿ, ಉಕ್ಕು ಕ್ಷೇತ್ರದ ಗರಿಷ್ಠ ಬೆಳವಣಿಗೆಯ ಭವಿಷ್ಯ ರೂಪಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

