ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾವಣಗೆರೆಗೆ ತೆರಳಿ ಇತ್ತೀಚಿಗೆ ನಮ್ಮನ್ನು ಅಗಲಿದ ಮಾಜಿ ಮಂತ್ರಿಗಳು, ಶಾಸಕರು ಹಾಗೂ ಹಿರಿಯರೂ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ತೆರಳಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಬಳಿಕ ಶ್ರೀಯುತರ ಪುತ್ರರು, ಸಚಿವರು ಆಗಿರುವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ವೈಯಕ್ತಿಕವಾಗಿ ನಾನು ಬಹಳ ಗೌರವಿಸುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರು ಕೇವಲ ಉದ್ಯಮಿಯಷ್ಟೇ ಅಲ್ಲ, ಕೊಡುಗೈ ದಾನಿ. ದುರ್ಬಲರ ಪಾಲಿಗೆ ದೇವರಾಗಿದ್ದರು.

ಅವರಿಲ್ಲದ ದಾವಣಗೆರೆಯಲ್ಲಿ ನನಗೆ ಶೂನ್ಯಭಾವ ಕಾಡಿತು. ಶ್ರೀಯುತರ ಸೇವಾ ತತ್ಪರತೆ, ಮಾನವೀಯತೆ, ಶಿಕ್ಷಣ ಮತ್ತು ರಾಜಕಾರಣದಲ್ಲಿ ಅವರು ಮೂಡಿಸಿರುವ ಸಾಧನೆಯ ಮೈಲುಗಲ್ಲುಗಳು ಅಜರಾಮರ ಎಂದು ಕುಮಾರಸ್ವಾಮಿ ತಿಳಿಸಿದರು.

