ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನಲ್ಲಿ ಅತಿ ಹೆಚ್ಚು ಹುಣಸೆ ಮತ್ತು ಶೇಂಗಾ ಬೆಳೆಯುತ್ತಿದ್ದು ರೈತರಿಗೆ ಅನುಕೂಲವಾಗಲು ಗುಡೆಕೋಟೆ ಸಮೀಪದ ಕಾಸಪುರದಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಮೊದಲ ಹುಣಸೆ ಹಾಗೂ ಶೇಂಗಾ ಸಂಸ್ಕರಣಾ ಘಟಕವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಕೂಡ್ಲಿಗಿಯು ಅತಿ ಹೆಚ್ಚು ಹುಣಸೆ ಬೆಳೆಯುವ ನಾಡಾಗಿದ್ದು ತಾಲೂಕು ಸೇರಿದಂತೆ ಸುತ್ತ ಮುತ್ತಲಿನ ರೈತರಿಗೆ ಸಂಸ್ಕರಣಾ ಘಟಕದಿಂದ ಅನುಕೂಲವಾಗಲಿದೆ. ತಾಲೂಕಿನಲ್ಲಿ ಬೆಳೆಯುವಂತ ಹುಣಸೆ ಹಾಗೂ ಶೇಂಗಾ ಬೆಳೆಯು ಗೂಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು.
ಆ ಮನವಿಗೆ ಕೇಂದ್ರ ಸರ್ಕಾರದಿಂದ ನಬಾರ್ಡ್ ನಿಗಮದಿಂದ 4.36 ಕೋಟಿ ವೆಚ್ಚದಲ್ಲಿ ಹುಣಸೆ ಹಾಗೂ ಶೇಂಗಾ ಸಂಸ್ಕರಣಾ ಘಟಕ ನಿರ್ಮಾಣ ಮಾಡಿ ರೈತರಿಗೆ ಉಪಯುಕ್ತವಾಗಲಿದೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್ ಟಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳ್ಳಾರಿ – ವಿಜಯನಗರ ಸಂಸದರಾದ ಈ ತುಕಾರಾಂ, ಹರಪನಹಳ್ಳಿ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಕೂಡ್ಲಿಗಿ ತಹಶೀಲ್ದಾರ್ ವಿ ಕೆ. ನೇತ್ರಾವತಿ ಹಾಗೂ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಇತರರು ಇದ್ದರು.

