ರಾಹುಲ್ ಗಾಂಧಿ ಹೇಳಿಕೆಗೆ ಹರಿಹಾಯ್ದ ಕೇಂದ್ರ ಸಚಿವ ಜೋಶಿ

News Desk

ಚಂದ್ರವಳ್ಳಿ ನ್ಯೂಸ್, ಧಾರವಾಡ:
ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಅನ್ನೋ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

ಈ ಕುರಿತು ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಆಗಿದ್ದರೆ 2013ರಲ್ಲಿ ಮತ್ತು 2023ರಲ್ಲಿ ಕಾಂಗ್ರೆಸ್ ಹೇಗೆ  136 ಸೀಟು ಪಡೆಯಿತು. ಮತಗಳ್ಳತನ ಆಗಿದೆಯಂತಾ ನಿಮಗೆ ಅಂದು ಗೊತ್ತಾಗಲಿಲ್ಲವೇ? ಒಂದು ವರ್ಷದವರೆಗೆ ನೀವು ಕತ್ತೆ ಕಾಯುತ್ತಿದ್ದಿರಾ? ನಿಮಗೆ ಜನರು ಅಯೋಗ್ಯರಿಗೆ ಮತ ಹಾಕಿದೆವು ಅಂತಾ ಶಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

- Advertisement - 

ಲೋಕಸಭೆಯಲ್ಲಿ ನಮಗೆ ಮತ ಹಾಕಿದ್ದಕ್ಕೆ ಈ ವಿಚಾರ ಕೇಳುತ್ತಿದ್ದಾರೆ. ಸೋತ ಬಳಿಕ ಮತಗಳ್ಳತನವಾಗಿದೆ, ಆಯೋಗ ಸರಿಯಿಲ್ಲ ಅನ್ನುತ್ತೀರಿ. ಜಾರ್ಖಂಡ್​​ನಲ್ಲಿ ನಿಮ್ಮ ಮಿತ್ರ ಪಕ್ಷ ಗೆದ್ದಿದೆ. ನೀವು ಅಲ್ಲಿ ನಿಮ್ಮ ಅಯೋಗ್ಯತನದಿಂದ ಸೋತಿದ್ದೀರಿ. ಆದರೂ ನಿಮ್ಮ ಮಿತ್ರಪಕ್ಷ ಅಲ್ಲಿ ಗೆದ್ದಿದೆ. ನಾವು ವಿರೋಧ ಪಕ್ಷದಲ್ಲಿದ್ದೇವೆ. ಆದರೆ ನಿಮ್ಮಂತೆ ಬೇರು ಸಮೇತ ಕಿತ್ತುಹೋಗಿಲ್ಲ. ಸೋತಾಗ ಇವಿಎಂ ಸರಿ ಇಲ್ಲ ಅನ್ನುತ್ತೀರಿ. ಗೆದ್ದಾಗ ಒಂದೇ ಒಂದು ಮಾತೂ ಆಡೋದಿಲ್ಲ. ಚುನಾವಣೆಯಾಗಿ ಫಲಿತಾಂಶ ಘೋಷಣೆಯಾದ ಬಳಿಕ ಒಂದೇ ಒಂದು ಅರ್ಜಿ ಹಾಕಿದ್ದೀರಾ? ನಮ್ಮ ಭಾರತದ ಕಣ ಕಣದಲ್ಲಿಯೂ ಪ್ರಜಾಪ್ರಭುತ್ವವಿದೆ ಎಂದು ಸಚಿವರು ತಿಳಿಸಿದರು.

ಕಳೆದ ಜುಲೈ 21 ರಿಂದ ಅಧಿವೇಶನ ಶುರುವಾಗಿದೆ. ಕಾಂಗ್ರೆಸ್, ಮಿತ್ರ ಪಕ್ಷಗಳು ಅಧಿವೇಶನ ನಡೆಯಲು ಬಿಡುತ್ತಿಲ್ಲ. ಕಾಂಗ್ರೆಸ್ ಅಧಿವೇಶನಕ್ಕೂ ಮುಂಚೆ ಏನು ಹೇಳಿತ್ತು? ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆಯಾಗಬೇಕು ಅಂದಿತ್ತು. ಹೀಗಾಗಿ ನಾವು ಅದಕ್ಕೆ ಸಿದ್ಧರಾಗಿದ್ದೆವು. ಆದರೆ ವಿರೋಧ ಪಕ್ಷ ಅದರ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ. ಬಳಿಕ ಮಾಧ್ಯಮದಲ್ಲಿ ಈ ಬಗ್ಗೆ ಜನರು ಅವರನ್ನು ಪ್ರಶ್ನಿಸಿದರು ಎಂದು ಹೇಳಿದ್ದಾರೆ.

- Advertisement - 

ಸೋಮವಾರ, ಮಂಗಳವಾರ ಚರ್ಚೆ ನಡೆಸಿದರು. ಬಳಿಕ ಮೋದಿ ಅವರು ಅದಕ್ಕೆ ಉತ್ತರ ನೀಡಿದರು. ಬಳಿಕ ವಿರೋಧ ಪಕ್ಷದವರು ಅದರ ಚರ್ಚೆ ಬಂದ್ ಮಾಡಿದರು. ದೇಶದಲ್ಲಿ ರಾಹುಲ್ ನೇತೃತ್ವದಲ್ಲಿ ಬೌದ್ಧಿಕವಾಗಿ ಕಾಂಗ್ರೆಸ್ ದಿವಾಳಿಯಾಗಿದೆ. ಇವರು ಏಕೆ ಅಧಿವೇಶನ ನಡೆಸಲು ಸಿದ್ಧರಿಲ್ಲ? ಸ್ಪೆಷಲ್ ಇಂಟೆನ್ಸಿವ್ ರಿವಿಜನ್ ಬಗ್ಗೆ ಚರ್ಚೆಯಾಗಬೇಕಿದೆ.

ಇದು ಮೊದಲನೇ ಬಾರಿ ಆಗುತ್ತಿಲ್ಲ, ಬಲರಾಮ್ ಜಾಖಡ್ ಸಭಾಧ್ಯಕ್ಷರಾಗಿದ್ದಾಗ ಒಂದು ರೂಲಿಂಗ್ ನೀಡಿದ್ಧಾರೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ರಾಜ್ಯಪಾಲರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬಾರದು ಅಂತಾ ರೂಲಿಂಗ್ ನೀಡಿದ್ದಾರೆ. ಏಕೆಂದರೆ ಅದು ನಿತ್ಯದ ಅವರ ಆಡಳಿತ ಎಂದಿದ್ದಾರೆ.

ಎಸ್​ಐಆರ್​​ನಲ್ಲಿ ಯಾವುದೂ ಹೊಸದಿಲ್ಲ. ಮೊದಲಿದ್ದದ್ದೇ ಇದೆ. ಅದರ ಹೆಸರಿನ ಮೇಲೆ ಚರ್ಚೆ ನಿಲ್ಲಿಸೋ ಯತ್ನ ನಡೆಸಿವೆ. ಒಂದು ವೇಳೆ ಚರ್ಚೆ ನಡೆದರೆ, ಹೇಗೆ ಆಪರೇಷನ್ ಸಿಂಧೂರ್​ನಲ್ಲಿ ಅವರ ಹೂರಣ ಹೊರಗೆ ಬಿದ್ದಂತೆ, ಇದರಲ್ಲಿ ಸಿಕ್ಕಿ ಹಾಕಿಕೊಳ್ಳೋ ಭಯಕ್ಕೆ ಲೋಕಸಭೆ ಕಲಾಪಕ್ಕೆ ಭಂಗ ತರುತ್ತಿದ್ದಾರೆ.

ಇದೀಗ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಸಿದ್ಧರಿಲ್ಲ, ಯುಪಿಎ ಸರ್ಕಾರದ ಅವಧಿಯಲ್ಲಿ 28 ಬಾಂಬ್ ದಾಳಿಗಳು ನಡೆದಿದ್ದವು. ಆದರೂ ಪಾಕಿಸ್ತಾನದ ಮೇಲೆ ಒಂದೇ ಒಂದು ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ. ಅವೆಲ್ಲವುಗಳ ಬಗ್ಗೆ ನಾವು ಅಧಿವೇಶನದಲ್ಲಿ ಬಯಲಿಗೆ ತಂದೆವು. ಹೀಗಾಗಿ ಇದೀಗ ಚರ್ಚೆ ನಡೆಸಲು ಅವರು ಬಿಡುತ್ತಿಲ್ಲ ಎಂದು ಜೋಶಿ ಆರೋಪಿಸಿದರು.

ಎಂ. ಎಸ್. ಗಿಲ್ ಅಂತಾ ಚುನಾವಣಾ ಆಯೋಗದ ಆಯುಕ್ತರಿದ್ದರು. ಅವರು ನಿವೃತ್ತಿಯಾದ ಬಳಿಕ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದಿರಿ. ಇನ್ನು ಟಿ. ಎನ್. ಶೇಷನ್ ಅನ್ನೋದು ದೊಡ್ಡ ಹೆಸರು. ಅವರು ನಿವೃತ್ತಿಯಾದ ಬಳಿಕ ಎಲ್. ಕೆ. ಅಡ್ವಾಣಿ ವಿರುದ್ಧ ಕಾಂಗ್ರೆಸ್​​​ನಿಂದ ಸ್ಪರ್ಧಿಸಿದರು. ರಾಜೀವ್ ಗಾಂಧಿ ಹತ್ಯೆಯಾದಾಗ ಇಡೀ ದೇಶದಲ್ಲಿಯೇ ಲೋಕಸಭಾ ಚುನಾವಣೆ ನಿಲ್ಲಿಸಿದಿರಿ. ರಾಜೀವ್ ಗಾಂಧಿ ಕ್ಷೇತ್ರದಲ್ಲಷ್ಟೇ ಚುನಾವಣೆ ನಿಲ್ಲಿಸಬೇಕಿತ್ತು. ಆದರೆ ಇಡೀ ದೇಶಾದ್ಯಂತ ಚುನಾವಣೆ ಸ್ಥಗಿತಗೊಳಿಸಿದಿರಿ. ನೆಹರು, ಇಂದಿರಾ, ರಾಜೀವ್ ಗಾಂಧಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡರು ಎಂದು ಜೋಶಿ ಹರಿಹಾಯ್ದರು.

ಇದೀಗ ನಮಗೆ ಚುನಾವಣಾ ಆಯೋಗದ ಬಗ್ಗೆ ಹೇಳಲು ಬರುತ್ತಿದ್ದಾರೆ. ನೇಮಕ ಮಾಡಲು ಸಮಿತಿ ಇವೆ, ನಿಯಮಗಳಿವೆ. ರಾಹುಲ್ ಗಾಂಧಿ ಅಧಿವೇಶನದಲ್ಲಿ ಮಾತಾಡಿದರೆ ಭೂಕಂಪವಾಗುತ್ತೆ ಅಂದಿದ್ದರು. ಬಳಿಕ ಇದೀಗ ಮತಗಳ್ಳತನದ ಬಗ್ಗೆ ಬಾಂಬ್ ಅಂದಿದ್ದಾರೆ. ಆವತ್ತು ಭೂಕಂಪವೂ ಆಗಲಿಲ್ಲ, ಇದೀಗ ಬಾಂಬ್ ಕೂಡ ಸಿಡಿಯಲಿಲ್ಲ. ದೇವರ ದಯೆಯಿಂದ ಭೂಕಂಪ ಆಗಿಲ್ಲ, ಬೇರೆ ಕಡೆಯಲ್ಲಿ ಆಗಿದೆ. ಅದಕ್ಕೆ ನಮ್ಮ ಸಂತಾಪವೂ ಇದೆ. ಮೂರ್ಖತನ ಪ್ರದರ್ಶನ ಮಾಡಲಿಕ್ಕೂ ಒಂದು ಮಿತಿ ಇರುತ್ತೆ. ಇಷ್ಟೊಂದು ಮೂರ್ಖತನವನ್ನು ಪ್ರದರ್ಶಿಸಬಾರದು ಎಂದು ಕೇಂದ್ರ ಸಚಿವರು ಟೀಕಿಸಿದರು.

 

 

 

Share This Article
error: Content is protected !!
";