ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಸಿದ್ದಗಂಗಾ ಆಯಿಲ್ ಮಿಲ್ನ ಗಾಣದ ಎಣ್ಣೆ ತಯಾರಿಕಾ ಘಟಕಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮಾಲೀಕ ಚಂದನ್ ಅವರ ಸೇವಾ ಮನೋಭಾವ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಎಣ್ಣೆಯನ್ನು ಕಡಿಮೆ ಬೆಲೆಗೆ ಒದಗಿಸುವ ಪ್ರಯತ್ನವನ್ನು ಅವರು ಪ್ರಶಂಸಿಸಿದರು.
ಜನಸಾಮಾನ್ಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಶುದ್ಧ ಮತ್ತು ಸುರಕ್ಷಿತ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ ಎಂದು ಹೇಳಿದರು.
ಸಿದ್ದಗಂಗಾ ಆಯಿಲ್ ಮಿಲ್ನಲ್ಲಿ ಪ್ಲಾಸ್ಟಿಕ್ ಮುಕ್ತ ಎಣ್ಣೆ ವಿತರಣೆ ಮಾಡುವ ಪ್ರಯತ್ನವೂ ವಿಶೇಷವಾಗಿದೆ. ಪರಿಸರ ಸಂರಕ್ಷಣೆಯ ಜತೆಗೆ ಆರೋಗ್ಯಕರ ಜೀವನ ಶೈಲಿಗೆ ಉತ್ತೇಜನ ನೀಡುವ ದಿಟ್ಟ ಹೆಜ್ಜೆಯನ್ನು ಸಂಸ್ಥೆ ಇಟ್ಟಿದೆ. ಈ ಮಾದರಿ ಪ್ರಯತ್ನಗಳು ಇತರ ಉದ್ಯಮಿಗಳಿಗೆ ಸಹ ಪ್ರೇರಣೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಚಂದನ್ ಅವರು ಸ್ಥಳೀಯವಾಗಿ ಬೆಳೆದ ಉತ್ತಮ ಗುಣಮಟ್ಟದ ಬೀಜಗಳಿಂದ ಎಣ್ಣೆ ತಯಾರಿಸಿ, ಗ್ರಾಹಕರಿಗೆ ನೈಸರ್ಗಿಕ ಮತ್ತು ಆರೋಗ್ಯಕರ ಉತ್ಪನ್ನವನ್ನು ಒದಗಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಳಸುವ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿ ತಯಾರಾಗುವ ಈ ಎಣ್ಣೆ, ವಿಶಿಷ್ಟ ರುಚಿ ಮತ್ತು ಗುಣಮಟ್ಟವನ್ನು ಹೊಂದಿದೆ. ಈ ಪ್ರಯತ್ನದಿಂದ ಸ್ಥಳೀಯ ಕೃಷಿಕರಿಗೆ ಸಹ ಬೆಂಬಲ ದೊರೆಯುತ್ತಿದೆ ಎಂದರು.
ಸ್ವತಃ ಈ ಎಣ್ಣೆಯನ್ನು ಖರೀದಿಸಿದ ಸಚಿವ ಸೋಮಣ್ಣ ಅವರು, ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಸಣ್ಣ ಉದ್ಯಮಗಳನ್ನು ಬೆಂಬಲಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು. ಇಂತಹ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಈ ಸಂದರ್ಭದಲ್ಲಿ ಪ್ರಸನ್ನ ಕುಮಾರ್, ಕೀರ್ತಿ, ಸೌಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.

