ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳಲ್ಲಿ ಬುಧವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಆರ್‌ಎಲ್‌ಜೆಐಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಬಳಿಕ ಮಾತನಾಡಿದ ಪ್ರಾಂಶುಪಾಲ ಡಾ.ವಿಜಯ್ ಕಾರ್ತಿಕ್, ಸಂವಿಧಾನ ರಚನಾ ಸಭೆಯ ಮೂಲಕ 1949ರ ನವೆಂಬರ್ 26ರಂದು ಮೊಟ್ಟ ಮೊದಲ ಬಾರಿಗೆ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು. ಇದರ ನೆನಪಿನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಡೀನ್‌ಡಾ.ಎಂ.ಶ್ರೀನಿವಾಸರೆಡ್ಡಿ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆ ಎನಿಸಿರುವ ಭಾರತದ ಸಂವಿಧಾನ, ಜಾಗತಿಕ ಮಾನ್ಯತೆಯನ್ನು ಪಡೆದಿದೆ. ಸ್ವಾತಂತ್ರ್ಯಾ ನಂತರದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸುಭದ್ರಪಡಿಸುವ ಮತ್ತು ದೇಶದ ಸಮಗ್ರ ಆಡಳಿತ ವ್ಯವಸ್ಥೆಯ ಪ್ರತಿರೂಪವಾಗಿದೆ ಎಂದರು.
ಲಯನ್ಸ್‌ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ.ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನದ ನೆನಪಿನಲ್ಲಿ ಕೇಂದ್ರ ಸರ್ಕಾರವು 2015 ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು. ಮನುಷ್ಯ ಸಂಬಂಧಗಳು ಜಾತಿ, ಧರ್ಮ ಆಧಾರಿತವಾಗಿ ರೂಪುಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಅಪಾಯಕಾರಿ. ಎಲ್ಲ ಭಿನ್ನತೆಗಳನ್ನು ಬದಿಗಿಟ್ಟು ಭಾರತೀಯ ರಾಷ್ಟ್ರೀಯ ಭಾವನೆಯನ್ನು ಪ್ರತಿಯೊಬ್ಬ ಪ್ರಜೆಯೂ ರೂಢಿಸಿಕೊಳ್ಳಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದರು.
ಎನ್‌ಎಸ್‌ಎಸ್‌ಅಧಿಕಾರಿ ಗೋವಿಂದರಾಜು, ವಿಭಾಗ ಮುಖ್ಯಸ್ಥರಾದ ಡಾ.ಅಲ್ಲಾ ಭಕ್ಷ್, ಡಾ.ಆರ್.ಎಂ.ಸುನಿಲ್‌ಕುಮಾರ್, ಡಾ.ಅನಿಲ್‌ಕುಮಾರ್, ಡಾ.ಶಿಲ್ಪಕಲಾ, ಎಸ್.ಯತಿನ್ ಮತ್ತಿತರರು ಹಾಜರಿದ್ದರು.
ಜಾಲಪ್ಪ ಕಾನೂನು ಕಾಲೇಜಿನಿಂದ ಜಾಥಾ:
ಜಾಲಪ್ಪ ಕಾನೂನು ಕಾಲೇಜು ಹಾಗೂ ಶ್ರೀ ದೇವರಾಜ ಅರಸ್‌ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ತಾಲೂಕು ಕಚೇರಿಯಿಂದ ಕಾಲೇಜಿನವರೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಕಾಲೇಜು ವಿದ್ಯಾರ್ಥಿಗಳು ಸಂವಿಧಾನದ ಸಂದೇಶಗಳನ್ನು ಸಾರುವ ಘೋಷಣೆಗಳೊಂದಿಗೆ ಜಾಥಾ ನಡೆಸಿದರು. ಕಾನೂನು ಕಾಲೇಜು ಪ್ರಾಂಶುಪಾಲ ಜಿ.ಟಿ.ಹನುಮಂತಪ್ಪ, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ವೆಂಕಟೇಶ್‌ಮತ್ತಿತರರು ಹಾಜರಿದ್ದರು.

