ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಯಕ ನಟ ಉಪೇಂದ್ರ(ಉಪ್ಪಿ) ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ಗಳನ್ನು ವಂಚಕರು ಹ್ಯಾಕ್ ಮಾಡಿ ಸಾಕಷ್ಟು ಹಣ ದೋಚಿರುವ ಕುರಿತು ಮಾಹಿತಿ ಹೊರ ಬರುತ್ತಿದೆ.
ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಈಗಾಗಲೇ ಈ ಕುರಿತು ಉಪೇಂದ್ರ ದಂಪತಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ನೀಡಿರುವ ಉಪೇಂದ್ರ ಮತ್ತು ಪ್ರಿಯಾಂಕಾ, ತಮ್ಮ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಕೊಡದಂತೆ ಮನವಿ ಕೂಡಾ ಮಾಡಿದ್ದಾರೆ.
ಪ್ರಿಯಾಂಕಾ ಅವರಿಗೆ ಸೋಮವಾರ ಕರೆ ಮಾಡಿದ್ದ ಲೈಬರ್ ವಂಚಕ, ನಿಮ್ಮ ಆರ್ಡರ್ ಡಿಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ಮಾಡಿ ಖಚಿತ ಪಡಿಸಿದರೆ ಡಿಲಿವರಿ ಮಾಡುತ್ತೇವೆ ಎಂದು ಹ್ಯಾಶ್ ಟ್ಯಾಗ್ ಸಹಿತ ಒಂದು ನಂಬರ್ ಕಳುಹಿಸಿದ್ದಾನೆ. ವಂಚಕ ಕಳುಹಿಸಿದ್ದ ನಂಬರ್ ಗೆ ಡಯಲ್ ಮಾಡುವಷ್ಟರಲ್ಲಿ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿದೆ. ಫೋನ್ನಲ್ಲಿ ಸಮಸ್ಯೆ ಇರಬಹುದು ಎಂದುಕೊಂಡ ಪ್ರಿಯಾಂಕಾ ಅವರು ಪತಿ ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಅವರ ಫೋನ್ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದಾರೆ. ಕೂಡಲೇ ಆ ಫೋನ್ಗಳೂ ಹ್ಯಾಕ್ ಆಗಿವೆ.
ಫೋನ್ ನಂಬರ್ ಹ್ಯಾಕ್ ಆದ ಬಳಿಕ ನಮ್ಮಿಬ್ಬರ ನಂಬರ್ಗಳಿಂದ ಹಣ ಕೇಳಿಕೊಂಡು ಪರಿಚಿತರಿಗೆ ಮೆಸೇಜ್ಗಳು ಹೋಗಿವೆ. ಖಚಿತಪಡಿಸಲು ಅವರು ಕರೆ ಮಾಡಿದರೂ ನಮಗೆ ತಲುಪುತ್ತಿಲ್ಲ. ಕಾಲ್ ಫಾರ್ವರ್ಡ್ ಮಾಡಿಟ್ಟಿದ್ದಾರೆ. ನಮ್ಮ ಪರಿಚಿತರು ಮೂರ್ನಾಲ್ಕು ಜನ ತುರ್ತು ಅಗತ್ಯವಿರಬಹುದು ಎಂದು ಸುಮಾರು ₹50 ಸಾವಿರದಷ್ಟು ಹಣ ವರ್ಗಾಯಿಸಿದ್ದಾರೆ. ನನ್ನ ಮಗ ಸಹ ಹಣ ವರ್ಗಾಯಿಸಿದ್ದಾನೆ. ಈ ರೀತಿಯ ಮೆಸೇಜ್ಗಳು ಬಂದರೆ ಯಾರೂ ದಯವಿಟ್ಟು ನಂಬಿ ಹಣ ಕಳುಹಿಸಬೇಡಿ. ಇದನ್ನು ಆದಷ್ಟು ಶೇರ್ ಮಾಡಿ ಎಂದು ಉಪೇಂದ್ರ ಅವರು ಮನವಿ ಮಾಡಿದ್ದಾರೆ.
ಮನೆಗೆ ಆರ್ಡರ್ ಮಾಡಿದ್ದ ಒಂದಷ್ಟು ವಸ್ತುಗಳು ಬರಬೇಕಿತ್ತು. ನಾನು ಅದೇ ಕಾಲ್ ಇರಬಹುದು ಎಂದು ಉತ್ತರಿಸಿದಾಗ, ಈ ರೀತಿ ಹ್ಯಾಕ್ ಮಾಡಿದ್ದಾರೆ. ಸ್ವಲ್ಪ ಅನುಮಾನವಿತ್ತು, ಆದರೆ ನಾನು ಗಡಿಬಿಡಿಯಲ್ಲಿ ಅವರುಹೇಳಿದ ನಂಬರ್ ಡಯಲ್ ಮಾಡಿದಾಗ ಈ ರೀತಿ ಆಗಿದೆ. ನಂತರ ನನ್ನ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದವರಿಗೆ, ತುರ್ತಾಗಿ ಬೇಕಿದೆ, 2 ಗಂಟೆಯೊಳಗೆ ವಾಪಾಸ್ ಕಳಿಸುತ್ತೇವೆ ಎಂದು ಹಣ ಕಳಿಸುವಂತೆ ಮೆಸೇಜ್ ಮಾಡಿದ್ದಾರೆ. ದಯವಿಟ್ಟು ಈ ರೀತಿಯ ಬೇಡಿಕೆಗಳನ್ನು ನಂಬಿ ಹಣ ಕಳುಹಿಸಬೇಡಿ ಎಂದು ಪ್ರಿಯಾಂಕಾ ಉಪೇಂದ್ರ ಮನವಿ ಮಾಡಿದ್ದಾರೆ.
ಟೆಕ್ನಾಲಜಿ ಯುಗದಲ್ಲಿ ತಂತ್ರಜ್ಞಾನ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ದುರುಪಯೋಗ ಆಗುತ್ತಿವೆ. ಜನಸಾಮಾನ್ಯರಿಂದ ಹಿಡಿದು ಜನಪ್ರಿಯ ಸಿನಿಮಾ ಸೆಲೆಬ್ರಿಟಿಗಳವರೆಗೆ ಸವಾಲುಗಳು ಎದುರಾಗುತ್ತಿವೆ. ಇತ್ತೀಚೆಗಷ್ಟೇ ದುಬೈ ಪ್ರವಾಸ ಮುಗಿಸಿಕೊಂಡು ಬಂದಿದ್ದ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ನಿಂದಾಗಿ ಒಂದಿಷ್ಟು ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ.

