ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿಯಮಬಾಹೀರವಾಗಿ ಕ್ರಿಯಾ ಯೋಜನೆ ಮಂಜೂರಾತಿ, ಅಕ್ರಮವಾಗಿ ಇ-ಸ್ವತ್ತು ವಿತರಣೆ, ಹಣದ ದುರಪಯೋಗ, ಸೇರಿದಂತೆ ಹಲವು ಆರೋಪಗಳ ಹಿನ್ನಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಜಿ.ಎಂ. ಕರಿಯಪ್ಪ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಓ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಉಪ್ಪರಿಗೇನಹಳ್ಳಿ ಪಿಡಿಓ ಜಿ.ಎಂ.ಕರಿಯಪ್ಪ ಅವರು, ಗ್ರಾ.ಪಂ. ಸಭೆಯಲ್ಲಿ ಚರ್ಚಿಸದೆ ನಿಯಮಬಾಹಿರವಾಗಿ ವಿವಿಧ ಯೋಜನೆಗಳಡಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುದಾನ ಖರ್ಚು ಮಾಡಿ, ಅನುದಾನದವನ್ನು ಸಂಪೂರ್ಣವಾಗಿ ದುರಪಯೋಗ ಪಡಿಸಿಕೊಂಡಿರುತ್ತಾರೆ.
15ನೇ ಹಣಕಾಸು ಆಯೋಗ ಕ್ರಿಯಾ ಯೋಜನೆಯ ಅಂದಾಜು ಪಟ್ಟಿ, ಎಂ.ಬಿ. ರೆಕಾರ್ಡ್, ಚೆಕ್ ಮೆಜರ್‍ಮೆಂಟ್ ಮೇಲಾಧಿಕಾರಿಗಳ ಸಹಿ ಇಲ್ಲದೆ ವೋಚರ್ ಮತ್ತು ಕೊಟೇಷನ್ ಇಲ್ಲದೇ, ತುಲನಾತ್ಮಕ ಪಟ್ಟಿಗೆ ಅನುಮೋದನೆ ನೀಡಿ, ಅಕ್ರಮವಾಗಿ ಹಣ ಪಾವತಿ ಮಾಡಿದ್ದಾರೆ.
ಕುಡಿಯುವ ನೀರಿನ ಮತ್ತು ವಿದ್ಯುತ್ ಸಾಮಗ್ರಿಗಳ ಖರೀದಿಯಲ್ಲಿ ಕೆ.ಪಿ.ಟಿ.ಟಿ ಆಕ್ಟ್ ಖರೀದಿ ನಿಯಮಗಳ ಉಲ್ಲಂಘನೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಜಿ.ಪಂ. ಲೆಕ್ಕಾಧಿಕಾರಿಗಳು ತನಿಖೆ ನಡೆಸಿ ಕರ್ತವ್ಯ ಲೋಪದ ಆಧಾರದ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
ಇದರನ್ವಯ ಜಿ.ಪಂ. ಸಿಇಓ ಎಸ್.ಜೆ. ಸೋಮಶೇಖರ್ ಅವರು, ಪಿಡಿಓ ಜಿ.ಎಂ.ಕರಿಯಪ್ಪ ವಿರುದ್ದ ಇಲಾಖೆ ವಿಚಾರಣೆ ಕಾಯ್ದಿರಿಸಿ ಅನುಮಾನತು ಮಾಡಿ ಆದೇಶಿಸಿದ್ದಾರೆ.