ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಲೋಕಸೇವಾ ಆಯೋಗವು 2024ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿದೆ.
ಉತ್ತರ ಭಾರತದ ಪ್ರಯಾಗ್ ರಾಜ್ ನಿವಾಸಿ ಶಕ್ತಿ ದುಬೆ ಪ್ರಥಮ ರ್ಯಾಂಕ್‌ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕ ಹಲವು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಡಾ.ಸಚಿನ್ ಗುತ್ತೂರು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಿರುವ ಸಚಿನ್ ಬಸವರಾಜ ಗುತ್ತೂರ ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ 529ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಐಎಫ್ಎಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಪಾಂಡುರಂಗ ಕಂಬಳಿ ಓರ್ವ ರೈತರ ಪುತ್ರ ಎನ್ನುವುದು ಮುಖ್ಯವಾಗಿದೆ. ಪಾಂಡುರಂಗ ಅವರ ಮನೆಯಲ್ಲಿ ಸಂಭ್ರಮ ವಾತಾವರಣ ಮನೆ ಮಾಡಿದೆ.
ರೈತ ಮಗನ ಸಾಧನೆ-
ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ರೈತ ಆನಂದ್ ಹಾಗೂ ಸುಶೀಲಮ್ಮ ದಂಪತಿಯ ಪುತ್ರ ಎ.ಮಧು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 544ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ ಮಧು ಅವರು ಪದವಿ ಪಡೆದಿದ್ದಾರೆ.
2024ರ ಯುಪಿಎಸ್‌ಸಿ ಪರೀಕ್ಷೆಯ ಕರ್ನಾಟಕದ ಟಾಪರ್‌ಗಳು-
ಆರ್.ರಂಗಮಂಜು – 24, ಸಚಿನ್ ಹರಿಹರ – 41, ಅನುಪ್ರಿಯಾ ಸಖ್ಯ – 120, ಬಿಎಂ ಮೇಘನಾ – 425, ಮಾಧವಿ ಆರ್ – 446, ಭರತ್ ಸಿ ಯಾರಂ – 567, ಭಾನುಪ್ರಕಾಶ್ – 523, ನಿಖಿಲ್ ಎಂಆರ್- 724, ಟಿ ವಿಜಯ್ ಕುಮಾರ್ – 894, ಹನುಮಂತಪ್ಪ ನಂದಿ – 910, ವಿಶಾಕ ಕದಂ – 962, ಸಂದೀಪ್ ಸಿಂಗ್ – 981, ಮೋಹನ್ ಪಾಟೀಲ್ – 984.
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್ಸಿ ಪರೀಕ್ಷೆಯ ಅಧಿಕೃತ ವೆಬ್ಸೈಟ್- upsc.gov.in ನಲ್ಲಿ ಪರಿಶೀಲಿಸಬಹುದು. ಅಥವಾ upsconline.gov.in ವೈಬ್ಸೈಟ್ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ.
1,009 ಅಭ್ಯರ್ಥಿಗಳ ನೇಮಕ- ಯುಪಿಎಸ್ಸಿಯ ವಿವಿಧ ಉನ್ನತ ಹುದ್ದೆಗಳಿಗೆ 1,009 ಅಭ್ಯರ್ಥಿಗಳ ನೇಮಕಕ್ಕೆ ಆಯೋಗವು ಶಿಫಾರಸು ಮಾಡಿದೆ. ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಕೇಂದ್ರದ ವಿವಿಧ ಹುದ್ದೆಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ.
ವರ್ಗವಾರು ಸಾಧನೆ-
ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ 335 ಅಭ್ಯರ್ಥಿಗಳು, ಆರ್ಥಿಕವಾಗಿ ದುರ್ಬಲ ವರ್ಗದಿಂದ 109, ಒಬಿಸಿ ವರ್ಗದಿಂದ 318 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) 160 ಮತ್ತು ಪರಿಶಿಷ್ಟ ವರ್ಗಗಳಿಗೆ (ಎಸ್ಟಿ) 87 ಅಭ್ಯರ್ಥಿಗಳು ಸೇರಿದ್ದಾರೆ.
ಐಚ್ಛಿಕ ವಿಷಯಗಳು: ಟಾಪ್ 25 ಸ್ಥಾನ ಗಳಿಸಿರುವ ಅಭ್ಯರ್ಥಿಗಳು ಮಾನವಶಾಸ್ತ್ರ, ವಾಣಿಜ್ಯ ಮತ್ತು ಲೆಕ್ಕಶಾಸ್ತ್ರ, ಭೂಗೋಳ, ಗಣಿತ, ತತ್ವಶಾಸ್ತ್ರ, ಭೌತಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ ಮತ್ತು ತಮಿಳು ಸಾಹಿತ್ಯ ಸೇರಿದಂತೆ ವಿವಿಧ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು.