ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ವತಿಯಿಂದ ನಗರದಲ್ಲಿ ನಗರ-ರೈತ ಸಹಭಾಗಿತ್ವದ ಘನ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಭಾಗವಾಗಿ ದೊಡ್ಡಬಳ್ಳಾಪುರದಲ್ಲಿ ಉತ್ಪತ್ತಿಯಾಗುವ ಪ್ರತ್ಯೇಕಿತ ತೇವ ತ್ಯಾಜ್ಯವನ್ನು ಸ್ವಯಂಪ್ರೇರಿತ ರೈತರಿಗೆ ನೀಡಲಾಗುತ್ತಿದ್ದು, ಅದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ.
ಮಾರ್ಚ್ 2025ರಲ್ಲಿ ಆರಂಭವಾದ ಈ ಯೋಜನೆ ಈಗ ಒಂದು ವರ್ಷದ ಯಶಸ್ವಿ ಅನುಷ್ಠಾನವನ್ನು ಪೂರ್ಣಗೊಳಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 5,000 ಟನ್ ತೇವ ತ್ಯಾಜ್ಯವನ್ನು ಸಮೀಪದ ಹನ್ನೆರಡು ಗ್ರಾಮಗಳ 80 ರೈತರಿಗೆ ನೀಡಲಾಗಿದೆ.
ಈ ಯೋಜನೆಯ ಯಶಸ್ಸನ್ನು ಆಚರಿಸುವ ಉದ್ದೇಶದಿಂದ 2026 ಮಾರ್ಚ್ 7ರಂದು ದೊಡ್ಡಬಳ್ಳಾಪುರದ AMB ಕನ್ವೆನ್ಶನ್ ಸೆಂಟರ್‌ನಲ್ಲಿ ಅನುಭವ ಹಂಚಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ (DUDC) ಯೋಜನಾ ನಿರ್ದೇಶಕರಾದ ಶ್ರೀ ರಮೇಶ್ ಬಿ ಎಸ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನಾ ನಿರ್ದೇಶಕರಾದ ರಮೇಶ್ ಬಿ ಎಸ್ ಅವರು ಈ ಯೋಜನೆಯನ್ನು ಮೆಚ್ಚಿ, ಜಿಲ್ಲೆಯ ಎಲ್ಲಾ ನಗರಸಭೆಗಳು ನಗರ-ರೈತ ಸಹಭಾಗಿತ್ವ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದರು.
ನಗರಸಭೆಯ ಆಯುಕ್ತ ಕಾರ್ತಿಕೇಶ್ವರ ಅವರು ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ಸಹಕಾರದೊಂದಿಗೆ IIHS ಸಂಸ್ಥೆ ನಗರದಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸುವ ಅಭ್ಯಾಸವನ್ನು ಹೆಚ್ಚಿಸಲು ಕೈಗೊಂಡಿರುವ ವರ್ತನೆ ಬದಲಾವಣೆ ಚಟುವಟಿಕೆಗಳ ಬಗ್ಗೆ ವಿವರಿಸಿ ಈ ಚಟುವಟಿಕೆಗಳಲ್ಲಿ ಸ್ವಯಂಸೇವಕರ ನಿಯೋಜನೆ, ಗೋಡೆ ಚಿತ್ರಣಗಳು, ರೈತರಿಗೆ ತರಬೇತಿ ಕಾರ್ಯಕ್ರಮಗಳು, ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಸೇರಿವೆ ಎಂದು ಹೇಳಿದರು.
IIHS ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಪುಷ್ಕರ ಎಸ್.ವಿ.ಅವರು ಕಳೆದ ಒಂದು ವರ್ಷದ ಯೋಜನೆಯ ಪ್ರಮುಖ ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು. ನಗರ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರವು ರಾಸಾಯನಿಕ ಗೊಬ್ಬರಗಳಿಗಿಂತ ಉತ್ತಮ ಫಲಿತಾಂಶ ನೀಡುತ್ತಿದೆ ಎಂಬುದನ್ನು ಅವರು ವಿವರಿಸಿದರು.
ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್‌ನ ಪ್ರಾದೇಶಿಕ ಮುಖ್ಯಸ್ಥರಾದ ಸುಜಿತ್ ನಾಗಪ್ಪ ಅವರು ಮಾತನಾಡಿ, ನಗರ-ರೈತ ಸಹಭಾಗಿತ್ವ ಮಾದರಿ ಹೊಸತನದ ಯೋಜನೆಯಾಗಿದ್ದು, ಇದು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಮತ್ತು ಉಪಾಧ್ಯಕ್ಷ ಕೆ ಮಲ್ಲೇಶ್ ಅವರು ಈ ಹೊಸತನದ ಯೋಜನೆಯನ್ನು ಜಾರಿಗೆ ತಂದ ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಪ್ಯೂಮನ್ ಸೆಟ್ಸ್ಮೆಂಟ್ಸ್ (IIHS) ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಕೊಡಿಗೆಹಳ್ಳಿಯ ರೈತ ವಿಜಯ್ ಕುಮಾರ್ ಮಾತನಾಡಿ ದೊಡ್ಡಬಳ್ಳಾಪುರ ನಗರಸಭೆ ಪ್ರತ್ಯೇಕಿತ ತೇವ ತ್ಯಾಜ್ಯವನ್ನು ರೈತರಿಗೆ ನೀಡುತ್ತಿರುವುದು ಉತ್ತಮ ಯೋಜನೆ. ಈ ಯೋಜನೆಯ ಮೂಲಕ ತಮ್ಮ ಹೊಲದಲ್ಲಿ 20 ಟನ್ ತೇವ ತ್ಯಾಜ್ಯದಿಂದ ಸುಮಾರು 5 ಟನ್ ಗೊಬ್ಬರವನ್ನು ತಯಾರಿಸಿ, ಈ ವರ್ಷ ಸುಮಾರು ₹20,000 ಕೃಷಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಇತರ ನಗರ ಸ್ಥಳೀಯ ಸಂಸ್ಥೆಗಳು ಕೂಡ ಈ ಮಾದರಿಯನ್ನು ಅನುಸರಿಸಿ ರೈತರಿಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ರೈತರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ರೈತರು ಈ ಯೋಜನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಕೋಲಾರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ನಗರಗಳಲ್ಲಿ ಈ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹೋಮನ್ ಸೆಟ್ಸ್ಮೆಂಟ್ಸ್ (1HS) ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರದೀಪ್ ಸೆಕ್ಸೆನ, ಸೇರಿದಂತೆ ಹಲವರು ಭಾಗವಹಿಸಿದ್ದರು.

