ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೂತನ ಗರ್ಭ ನಿರೋಧಕಗಳ ಬಳಸಿರಿ. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಪಾಡಿರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಬುಧವಾರ ತಾಲ್ಲೂಕು ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಗಳು, ಶುಶ್ರೂಷಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಿಗೆ ಆಯೋಜಿಸಿದ ಕುಟುಂಬ ಕಲ್ಯಾಣ ಕಾರ್ಯಕ್ರಮದ ನೂತನ ಗರ್ಭ ನಿರೋಧಕಗಳು ಮತ್ತು ಡಿಂಪಾ ಚುಚ್ಚುಮದ್ದು ಬಗ್ಗೆ ತರಬೇತಿ ಕಾರ್ಯಗಾರದಲ್ಲಿ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಪ್ರದರ್ಶನ ಮಾಡುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳುವುದು, ಜನಸಂಖ್ಯೆ ನಿಯಂತ್ರಣ ಮಾಡುವುದು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಕುಟುಂಬ ಯೋಜನೆ ಬಹು ಮುಖ್ಯ ಎಂದರು.
ಫಲಾನುಭವಿಗಳಿಗೆ ಮಾಹಿತಿ ಕೊರತೆಯಾಗದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದರ ಮುಖಾಂತರ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಆರೋಗ್ಯ ಸೇವೆ ತಲುಪಲು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಸಾರ್ವಜನಿಕರಿಗೆ ಗುಣಮಟ್ಟದ ಹೆರಿಗೆ ಮತ್ತು ಸೇವಾ ಸೌಲಭ್ಯ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಔಷಧಿ ದಾಸ್ತಾನು ಕೊರತೆಯಾದರೆ ಜನ ಆರೋಗ್ಯ ಸಮಿತಿ, ಆರೋಗ್ಯ ರಕ್ಷಾ ಸಮಿತಿ ಅನುದಾನ ಬಳಕೆ ಮಾಡಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭರಮಸಾಗರ ಸಿಎಚ್‍ಸಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ.ವಿನಯ್ ರಾಜ್ ತರಬೇತಿ ನೀಡುತ್ತಾ, ಅರ್ಹರಿಗೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಲಭ್ಯ ಇರುವ ಬಗ್ಗೆ ಸಾರ್ವಜನಿಕರಿಗೆ ಹಲವು ಆಧುನಿಕ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಮಾಹಿತಿ ತಿಳಿಸುತ್ತಾ, ವಿಧಾನಗಳ ಆಯ್ಕೆ ಆಕಾಂಕ್ಷಿಗಳಿಗೆ ಇರಲಿ ಎಂದರು.
ಜಿ.ಎನ್.ಕೆರೆ ಆಡಳಿತ ವೈದ್ಯಾಧಿಕಾರಿ ಶಶಿಕಿರಣ್ ಅವರು, ತುರ್ತು ಗರ್ಭನಿರೋಧಕಗಳು ಮತ್ತು ನುಂಗುವ ಮಾತ್ರೆಗಳ ಬಗ್ಗೆ ತರಬೇತಿ ನೀಡಿದರು.
ಈ ವೇಳೆ ಜಿಲ್ಲಾ ಗುಣಮಟ್ಟ ಸಲಹೆಗಾರರಾದ ಡಾ.ರೇಖಾ ಅವರು ಕಾಯಕಲ್ಪ ಹಾಗೂ ರಾಷ್ಟ್ರೀಯ ಗುಣಮಟ್ಟ ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಶುಶ್ರೂಷಾಧಿಕಾರಿ ಸರಸ್ವತಿ, ಎಂಅಂಡ್‍ಡಿ ಮ್ಯಾನೇಜರ್ ಕುಮಾರ್, ಕಾರ್ಯಕ್ರಮ ಅನುಷ್ಠಾನ ಸಹಾಯಕಿ ಭವ್ಯ, ಸಿಬ್ಬಂದಿ ಶ್ರೀದೇವಿ ಹಾಗೂ ಜಿಲ್ಲೆಯ ಶುಶ್ರೂಷಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಮತ್ತಿತರರು ಹಾಜರಿದ್ದರು.

