ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮುಂಬರುವ ಎಲ್ಲ ಚುನಾವಣೆ ನಡೆಸಲು ಶಿಫಾರಸು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್ ಅವರು ತಿಳಿಸಿದರು. ಸ್ಥಳೀಯ ಚುನಾವಣೆಗಳಿಗೆ ಮತದಾರರ ಪಟ್ಟಿ ಸಿದ್ಧಪಡಿಸಲು, ಪರಿಷ್ಕರಣೆ, ಅಗತ್ಯ ಕಾನೂನು ಮತ್ತು ನಿಯಮಾವಳಿ ಬದಲಾವಣೆ ಮಾಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಣಯ ಮಾಡಿದೆ ಎಂದು ಸಚಿವರು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ಮಾಡುವುದಕ್ಕೆ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದಕ್ಕೆ ಕೆಲವು ತಿದ್ದುಪಡಿಗಳು ಮತ್ತು ನಿಯಮಾವಳಿಗಳು ಬೇಕಾಗುತ್ತವೆ. ಅಗತ್ಯ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ತಯಾರಿಕೆಯಲ್ಲಿ ವ್ಯತ್ಯಾಸಗಳಾಗಿದ್ದು ಮತಗಳ್ಳತನ ಆರೋಪಗಳು ಕೇಳಿಬಂದಿವೆ. ಜೊತೆಗೆ ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿಯ ಆಧಾರದ ಮೇಲೆ ಈ ತೀರ್ಮಾನ ಮಾಡಲಾಗಿದೆ. ಹಾಗಾಗಿ, ಅಗತ್ಯ ಕಾನೂನು ತಿದ್ದುಪಡಿತರಲು ಮತ್ತು ನಿಯಮಾವಳಿ ರಚನೆ ಮಾಡಲು ಶಿಫಾರಸ್ಸಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

