ಚಂದ್ರವಳ್ಳಿ ನ್ಯೂಸ್, ತಿರುಪತಿ :
ಆಂಧ್ರ ಪ್ರದೇಶದ ಸುಪ್ರಸಿದ್ಧ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಸಾದವಾದ ಲಡ್ಡು ಯಾರಿಗೆ ಇಷ್ಟವಿಲ್ಲ? ಆದರೆ ಈ ಲಡ್ಡುಗಳ ಕುರಿತು ಆಘಾತಕಾರಿ ಸಂಗತಿಯೊಂದು ಹೊರಬಂದಿದೆ.
ಲಡ್ಡು ತಯಾರಿಕೆಗೆ ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಹಾಗೂ ಪಾಮ್ ಎಣ್ಣೆ ಬಳಸಿರುವುದು ಪ್ರಯೋಗಾಲಯದ ಪರೀಕ್ಷಾ ವರದಿಯಿಂದ ಬೆಳಕಿಗೆ ಬಂದಿದೆ.ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಜನಪ್ರಿಯ ತಿರುಪತಿ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ಪದಾರ್ಥಗಳು ಹಾಗೂ ಪ್ರಾಣಿಗಳ ಕೊಬ್ಬನ್ನು ಬಲಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಬುಧವಾರವಷ್ಟೇ ಗಂಭೀರ ಆರೋಪ ಮಾಡಿದ್ದರು.
ಅದರ ಬೆನ್ನಲ್ಲೇ ಗುರುವಾರ ಲ್ಯಾಬ್‌ನ ಪರೀಕ್ಷಾ ವರದಿ ಬಂದಿದ್ದು, ಆರೋಪ ಸತ್ಯ ಎಂದು ತಿಳಿಸಿದೆ. ಆದರೆ ಈ ಆರೋಪವನ್ನು ವೈಎಸ್‌ಆರ್ ಕಾಂಗ್ರೆಸ್ ತಿರಸ್ಕರಿಸಿದೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿಯೇ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಸೇರಿದಂತೆ ಪ್ರಾಣಿಗಳ ಕೊಬ್ಬಿನ ಅಂಶಗಳು ಪತ್ತೆಯಾಗಿವೆ ಎಂದು ಲ್ಯಾಬ್ ವರದಿಯಲ್ಲಿ ಹೇಳಲಾಗಿದೆ.
ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಗನ್ ಸರ್ಕಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.ಗುಜರಾತ್‌ನ ರಾಷ್ಟ್ರೋಯ ಡೇರಿ ಅಭಿವೃದ್ಧಿ ಮಂಡಳಿಯಲ್ಲಿರುವ ಜಾನುವಾರು ಮತ್ತು ಆಹಾರ ವಿಶ್ಲೇಷಣೆ ಹಾಗೂ ಕಲಿಕೆ ಕೇಂದ್ರ (ಸಿಎಎಲ್‌ಎಫ್) ಆಂಧ್ರ ಪ್ರದೇಶ ಸರ್ಕಾರಕ್ಕೆ ಈ ವರದಿ ಸಲ್ಲಿಸಿದೆ.